
ಸೋಲೋ ಟ್ರಾವೆಲಿಂಗ್ ಈಗ ಹೆಚ್ಚು ಜನರ ಹವ್ಯಾಸವಾಗಿದೆ. ಒಬ್ಬೊಬ್ಬರೇ ಅಜ್ಞಾತ ಸ್ಥಳಗಳಿಗೆ ಭೇಟಿ ಕೊಡುವುದರಲ್ಲಿ ಒಂದು ಥ್ರಿಲ್ ಅನುಭವಿಸೋ ಕಾಲವಿದು. ಅಷ್ಟೇ ಅಲ್ಲದೇ, ಉದ್ಯೋಗಕ್ಕಾಗಿ, ಯಾವುದೋ ಪರೀಕ್ಷೆ ಬರೆಯುವ ಸಲುವಾಗಿ, ಸ್ನೇಹಿತರ ಭೇಟಿಗಾಗಿ ಗೊತ್ತಿಲ್ಲದ ಸ್ಥಳಕ್ಕೆ ಜನರು ಭೇಟಿ ಕೊಡುವುದು ಸಾಮಾನ್ಯ ಹಾಗೆ ಅನಿವಾರ್ಯ ಕೂಡಾ.
ಒಂಟಿ ಪ್ರವಾಸ ಧೈರ್ಯ ಕಲಿಸುವುದರ ಜೊತೆಗೆ ಒಂದು ಹೊಸ ಅನುಭವವನ್ನು ಕೊಡುವುದಂತೂ ಸತ್ಯ. ಆದರೆ ಹೀಗೆ ಒಂಟಿಯಾಗಿ ಪ್ರವಾಸಕ್ಕೆ ಹೊರಟಾಗ ಕೆಲವೊಂದು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಲೇಬೇಕು.
ಒಂಟಿಯಾಗಿ ಪ್ರವಾಸ ಹೋಗುವ ಮುನ್ನ ಒಮ್ಮೆ ವೈದ್ಯರ ಬಳಿ ಸಾಮಾನ್ಯ ತಪಾಸಣೆಗೆ ಒಳಪಡುವುದು ಒಳ್ಳೆಯದು.
ಬಹಳ ದೂರದ ಸ್ಥಳಕ್ಕೆ ಪ್ರವಾಸ ಹೋಗುವ ಪ್ಲಾನ್ ಇದ್ದವರು ತಮ್ಮ ಬಳಿ ಸದಾ ನೀರಿನ ಬಾಟಲಿ, ಸ್ವಲ್ಪ ಸಕ್ಕರೆ, ಉಪ್ಪು, ಚಾಕಲೇಟ್ ಇರುವಂತೆ ನೋಡಿಕೊಳ್ಳಬೇಕು. ಧಿಡೀರನೆ ಕೆಲವರಿಗೆ ಬಳಲಿಕೆ ಆದಾಗ ತಕ್ಷಣ ಚೈತನ್ಯ ಸಿಗಲು ಈ ಎಲ್ಲಾ ವಸ್ತುಗಳ ಸೇವನೆ ಅಗತ್ಯ.
ನಮ್ಮ ಪ್ರಯಾಣದ ಬಗ್ಗೆ ಒಬ್ಬರಿಗಾದರೂ ಮಾಹಿತಿ ಕೊಡುವುದು ಒಳ್ಳೆಯದು. ನಮ್ಮ ಆಪ್ತರ ಮೊಬೈಲ್ ನಂಬರ್ ಅನ್ನು ಒಂದು ಸಣ್ಣ ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುವುದು ಒಳಿತು. ಮೊಬೈಲ್ ನಲ್ಲಿ ಚಾರ್ಜ್ ಇಲ್ಲದೆ ಇರುವಾಗ, ನೆಟ್ವರ್ಕ್ ಕೈ ಕೊಟ್ಟಾಗ ತುರ್ತು ಸಂದರ್ಭದಲ್ಲಿ ಇದು ಉಪಯೋಗಕ್ಕೆ ಬರುತ್ತದೆ.