ಬ್ರಿಟನ್: ಸೋಂಕಿತರ ಆಸೋಲೇಶನ್ ಅವಧಿ ಹೆಚ್ಚಿಸದಿದ್ದರೆ ಮತ್ತೆ ಅಂತಹ ವ್ಯಕ್ತಿಗಳಿಂದ ಹೆಚ್ಚಿನ ಜನರಿಗೆ ಸೋಂಕು ಹರಡುವ ಸಾಧ್ಯತೆ ದಟ್ಟವಾಗಿರುತ್ತದೆ ಎಂದು ವರದಿಯೊಂದು ಹೇಳಿದೆ.
ಕೊರೊನಾ ಸೋಂಕಿಗೆ ಒಳಗಾದ ವ್ಯಕ್ತಿ ಹತ್ತು ದಿನಗಳ ನಂತರವೂ ಸೋಂಕು ಹರಡಿಸಬಲ್ಲರು. ಹೀಗಾಗಿ ಐಸೋಲೇಶನ್ ಅವಧಿಯನ್ನು ವಿಸ್ತರಿಸಬೇಕು ಎಂದು ಹಲವು ರಾಷ್ಟ್ರಗಳಿಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಇಂಗ್ಲೆಂಡ್ ನಲ್ಲಿ ಐಸೋಲೇಶನ್ ಅವಧಿಯನ್ನು ಕೇವಲ 5 ದಿನಗಳಿಗೆ ಸೀಮಿತ ಮಾಡಲಾಗಿದೆ. ಹೆಚ್ಚಿನ ಜನರು ಸೋಂಕಿಗೆ ತುತ್ತಾಗುತ್ತಿರುವುದರಿಂದಾಗಿ ಕಚೇರಿಗಳಲ್ಲಿನ ಕೆಲಸಕ್ಕೆ ತೊಂದರೆಯಾಗುವ ನಿಟ್ಟಿನಲ್ಲಿ ಈ ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕ್ರಮದಿಂದಾಗಿ ಸೋಂಕು ಹೆಚ್ಚಳಕ್ಕೆ ನಾವೇ ಆಹ್ವಾನ ನೀಡಿದಂತಾಗುತ್ತದೆ ಎಂದು ಬ್ರಿಟನ್ ನ ಎಕ್ಸೆಟರ್ ವಿವಿಯ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.
ಸಂಶೋಧನೆಯಲ್ಲಿ 176 ಜನರನ್ನು ಪರೀಕ್ಷಿಸಲಾಗಿತ್ತು. ಈ ಪೈಕಿ ಶೇ.13ರಷ್ಟು ಜನರು ಸೋಂಕಿಗೆ ತುತ್ತಾದ 10 ದಿನಗಳ ನಂತರವೂ ಸೋಂಕು ಹರಡಿಸಬಲ್ಲರು ಎಂಬುವುದನ್ನು ಸಂಶೋಧನೆಯಿಂದ ಕಂಡುಕೊಳ್ಳಲಾಗಿದೆ. ಹೀಗಾಗಿಯೇ ಐಸೋಲೇಶನ್ ನ ಅವಧಿಯನ್ನು 5 ದಿನಗಳಿಗಿಂತ ಹೆಚ್ಚಿಸಬೇಕು ಎಂದು ಅಧ್ಯಯನ ಹೇಳಿದೆ.
ರೋಗಿಯ ರೋಗ ನಿರೋಧಕ ಶಕ್ತಿ, ವೈರಸ್ ನ ಲಕ್ಷಣ ಹಾಗೂ ತೀವ್ರತೆಯ ಮೇಲೆ ಸೋಂಕಿತ ವ್ಯಕ್ತಿಯಿಂದ ವೈರಸ್ ಹರಡುವ ಸಾಧ್ಯತೆ ಕುರಿತು ತಿಳಿದು ಬರುತ್ತದೆ. ಹೀಗಾಗಿ ಎಲ್ಲರಿಗೂ ಐಸೋಲೇಶನ್ ಅವಧಿಯನ್ನು ಒಂದೇ ರೀತಿಯಾಗಿ ಮಾಡಬಾರದು. ಈ ಅವಧಿಯನ್ನು ಎಲ್ಲರಿಗೂ ಹೆಚ್ಚಿಸಿದರೆ ಉತ್ತಮ ಎಂದು ತಜ್ಞರು ಸೂಚಿಸಿದ್ದಾರೆ.