ಮಂಗಳೂರು: ಐಸಿಎಸ್ ಉಗ್ರರ ಸಂಘಟನೆ ಜೊತೆಗೆ ನಂಟು ಇರುವ ಶಂಕೆಯ ಹಿನ್ನೆಲೆಯಲ್ಲಿ ಮತ್ತೊಮ್ಮೆ ಉಳ್ಳಾಲದ ಮಾಜಿ ಶಾಸಕರ ಪುತ್ರನ ಮನೆಯ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಕಳೆದ ಕೆಲವು ತಿಂಗಳುಗಳ ಹಿಂದೆಯೇ ಉಗ್ರರ ಜೊತೆ ನಂಟಿರುವ ಶಂಕೆಯ ಹಿನ್ನೆಲೆಯಲ್ಲಿ ಮಾಜಿ ಶಾಸಕ ದಿವಂಗತ ಬಿ.ಎಂ. ಇದಿನಬ್ಬ ಅವರ ಪುತ್ರನ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಆದರೆ, ಆಗ ಮಾಜಿ ಶಾಸಕರ ಕಿರಿಯ ಪುತ್ರ ಅಬ್ದುಲ್ ರೆಹಮಾನ್ ಎಂಬಾತನನ್ನು ಬಂಧಿಸಿದ್ದರು.
ಆ ಸಂದರ್ಭದಲ್ಲಿ ಎನ್ಐಎ ಅಧಿಕಾರಿಗಳಿಗೆ ಮಾಜಿ ಶಾಸಕರ ಇನ್ನೊಬ್ಬ ಪುತ್ರ ಅನಾಸ್ ಎಂಬುವವರ ಪತ್ನಿ ದೀಪ್ತಿ ಅಲಿಯಾಸ್ ಮರಿಯಂ ಅವರ ಮೇಲೆಯೂ ಸಂಶಯ ವ್ಯಕ್ತವಾಗಿತ್ತು. ಆದರೆ, ಅವರಿಗೆ ಚಿಕ್ಕ ಮಗು ಇದ್ದ ಕಾರಣ ಅವರನ್ನು ಬಂಧಿಸಿರಲಿಲ್ಲ. ಇಂದು ಮತ್ತೊಮ್ಮೆ ದಾಳಿ ನಡೆಸಿ, ಮರಿಯಂ ಅವರನ್ನು ವಶಕ್ಕೆ ಪಡೆದಿದ್ದಾರೆ.
ಮಹಿಳೆಯನ್ನು ಎನ್ ಐಎ ಅಧಿಕಾರಿಗಳ ತಂಡ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ, ಮೆಡಿಕಲ್ ಟೆಸ್ಟ್ ಮಾಡಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ, ದೆಹಲಿಗೆ ಕರೆದುಕೊಂಡು ಹೋಗಲಿದ್ದಾರೆ ಎಂದು ತಿಳಿದು ಬಂದಿದೆ.