ವಿಧಾನಸಭಾ ಚುನಾವಣೆಗೆ ಇನ್ನು ಕೆಲ ತಿಂಗಳಿದ್ದು, ಆಡಳಿತರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಈಗಾಗಲೇ ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿವೆ. ಎಲ್ಲ ಪಕ್ಷಗಳ ನಾಯಕರು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಬಿರುಸಿನ ಸಂಚಾರ ನಡೆಸಿದ್ದು, ಚುನಾವಣೆಗೆ ತಯಾರಿ ನಡೆಸಿದ್ದಾರೆ.
ಕಾಂಗ್ರೆಸ್, ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ಬಯಸಿರುವ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಸ್ವೀಕರಿಸಿದ್ದು, ಇವುಗಳನ್ನು ಪರಿಶೀಲಿಸಿದ ನಂತರ ಹೈಕಮಾಂಡ್ ಗೆ ಕಳುಹಿಸಿಕೊಟ್ಟು ಅನುಮೋದನೆ ಪಡೆಯಲಾಗುತ್ತದೆ. ಆದರೆ ಈ ಪ್ರಕ್ರಿಯೆಗಳಿಗೂ ಮುನ್ನವೇ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಚ್ಚರಿ ಮೂಡಿಸಿದ್ದಾರೆ.
ಭಾನುವಾರದಂದು ಕೊಪ್ಪಳ ತಾಲೂಕಿನ ವಣಬಳ್ಳಾರಿ ಗ್ರಾಮಕ್ಕೆ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಆಗಮಿಸಿದ್ದ ಸಿದ್ದರಾಮಯ್ಯನವರು, ಗಂಗಾವತಿಗೆ ಇಕ್ಬಾಲ್ ಅನ್ಸಾರಿ, ಯಲಬುರ್ಗಾಕ್ಕೆ ಬಸವರಾಜ ರಾಯರೆಡ್ಡಿ, ಕನಕಗಿರಿಗೆ ಶಿವರಾಜ ತಂಗಡಗಿ, ಕುಷ್ಟಗಿಗೆ ಅಮರೇಗೌಡ ಬಯ್ಯಾಪುರ ಹಾಗೂ ಕೊಪ್ಪಳ ಕ್ಷೇತ್ರಕ್ಕೆ ರಾಘವೇಂದ್ರ ಹಿಟ್ನಾಳ್ ಅಭ್ಯರ್ಥಿಗಳೆಂದು ಘೋಷಿಸಿದ್ದಾರೆ.