ಭಾರತೀಯ ಶಿಲ್ಪಕಲೆಯ ತೊಟ್ಟಿಲು ಎನಿಸಿರುವ ಐಹೊಳೆ, ಬೆಂಗಳೂರಿನಿಂದ 483 ಕಿ. ಮೀ ದೂರದಲ್ಲಿ ಮಲಪ್ರಭಾ ನದಿಯ ದಂಡೆಯಲ್ಲಿದೆ. ಬಾಗಲಕೋಟೆ ಜೆಲ್ಲೆಯ ಬಾದಾಮಿ ತಾಲ್ಲೂಕಿಗೆ ಸೇರಿದ ಐಹೊಳೆ ಚಾಲುಕ್ಯ ವಾಸ್ತು ಶಿಲ್ಪದ ಒಂದು ದೊಡ್ಡ ಕೇಂದ್ರವಾಗಿದೆ.
ಐಹೊಳೆ ನಿರ್ಮಾಣಗೊಂಡದ್ದು ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ. ಬಾದಾಮಿ ಚಾಲುಕ್ಯರ ಮೊದಲ ರಾಜಧಾನಿ ಇದಾಗಿತ್ತು. ಐಹೊಳೆಯ ಹೆಸರು ಶಾಸನಗಳಲ್ಲಿ ಆರ್ಯಪುರ ಎಂದು ಉಲ್ಲೇಖಿಸಲ್ಪಟ್ಟಿದೆ.
ಇದನ್ನು ದೇವಾಲಯ ವಾಸ್ತು ನಿರ್ಮಾಣದ ತೊಟ್ಟಿಲು ಎಂದು ಕರೆಯುತ್ತಾರೆ. 6ರಿಂದ 8ನೇ ಶತಮಾನದವರೆಗೆ ಗುಹಾಲಯ ಹಾಗು ದೇವಾಲಯಗಳ ನಿರ್ಮಾಣದಲ್ಲಿ ಅನೇಕ ರೀತಿಯ ಪ್ರಯೋಗಗಳು ನಡೆದದ್ದನ್ನು ಕಾಣಬಹುದು. ಐಹೊಳೆಯೂ ಈ ಪ್ರಯೋಗಗಳಿಗೆ ಸಾಕ್ಷಿಯಾಗಿತ್ತು.
ಇಲ್ಲಿ ಸುಮಾರು 120 ದೇವಾಲಯ ಹಾಗು 4 ಗುಹಾಲಯಗಳಿವೆ. ಇವನ್ನೆಲ್ಲ ಬೇರೆ ಬೇರೆ ಕಾಲಘಟ್ಟಗಳಲ್ಲಿ ನಿರ್ಮಿಸಲಾಗಿದ್ದು ಪ್ರತಿಯೊಂದರ ವಾಸ್ತು ಭಿನ್ನವಾಗಿವೆ. ಇಲ್ಲಿನ ದೇವಾಲಯಗಳಲ್ಲಿ ದುರ್ಗಾ ದೇವಾಲಯ ಅತ್ಯಂತ ಪ್ರಮುಖವಾದುದು. ಇಲ್ಲಿ ವಾಸ್ತು ಶಿಲ್ಪದ ಸೌಂದರ್ಯ ಶತ್ರುಗಳ ದಾಳಿಗೆ ಒಳಗಾಗಿ ಹಾಳಾಗಿರುವುದು ಮಾತ್ರ ದುರ್ದೈವ.