ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಐತಿಹಾಸಿಕ ಜಂಬೂ ಸವಾರಿಗೆ ಅದ್ಧೂರಿ ಚಾಲನೆ ದೊರೆತಿದೆ.
ಎರಡು ವರ್ಷಗಳ ಕೊರೊನಾ ಬಳಿಕ ಈ ವರ್ಷ ಮೈಸೂರು ದಸರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ವಿಜಯದಶಮಿ ದಿನವಾದ ಇಂದು ಐತಿಹಾಸಿ ಜಂಬೂ ಸವಾರಿಗೆ ಚಾಲನೆ ನೀಡಲಾಯಿತು. ಸಂಜೆ 5:7ರಿಂದ 5:18ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಅಭಿಮನ್ಯು ಆನೆಯ ಮೇಲೆ 750 ಕೆಜಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿರುವ ತಾಯಿ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಿಎಂ ಬಸವರಾಜ್ ಬೊಮ್ಮಾಯಿ, ಯದುವೀರ್ ಒಡೆಯರ್ ಚಾಲನೆ ನೀಡಿದರು.
ಅಭಿಮನ್ಯು ಆನೆ ಮೂರನೇ ಬಾರಿಗೆ ಅಂಬಾರಿ ಹೊತ್ತು ಸಾಗಿದ್ದು, ಅರ್ಜುನ ನಿಶಾನೆ, ಚೈತ್ರ ಮತ್ತು ಕಾವೇರಿ ಕುಮ್ಕಿ ಆನೆಗಳಾಗಿ ಜಂಬೂ ಸವಾರಿಯಲ್ಲಿ ಸಾಗಿವೆ.
ಅರಮನೆಯಿಂದ ಕೆ ಆರ್ ಸರ್ಕಲ್, ಸಯ್ಯಾಜಿ ರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಆರ್ ಎಂ ಸಿ, ತಿಲಕ್ ನಗರ ರಸೆಗಳ ಮೂಲಕ ಜಂಬೂ ಸವಾರಿ ಬನ್ನಿ ಮಂಟಪ ತಲುಪಲಿದೆ.
ಜಂಬೂ ಸವಾರಿ ಮೆರವಣಿಗೆಯಲ್ಲಿ 47 ಸ್ಥಬ್ಧಚಿತ್ರಗಳು ಭಾಗವಹಿಸಿದ್ದು, 31 ಜಿಲ್ಲೆಗಳ ಕಲೆ, ಸಾಹಿತ್ಯ, ಇತಿಹಾಸವನ್ನು ಪ್ರತಿನಿಧಿಸುವ ಸ್ಥಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದೆ.