
ಆದಾಯ ತೆರಿಗೆ ಪಾವತಿಸಲು ಜುಲೈ 31 ಕೊನೆಯ ದಿನಾಂಕ. ಫೈಲಿಂಗ್‌ಗೆ ಇನ್ನು ಕೇವಲ ನಾಲ್ಕು ದಿನಗಳು ಬಾಕಿ ಇವೆ. ದಂಡ ಅಥವಾ ಇತರ ಕಾನೂನು ಕ್ರಮಗಳಿಂದ ಪಾರಾಗಬೇಕಂದ್ರೆ ಗಡುವು ಮುಗಿಯುವ ಮೊದಲೇ ತೆರಿಗೆದಾರರು ITR ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ITR ಅನ್ನು ಸಕಾಲಕ್ಕೆ ಸಲ್ಲಿಸಿದ್ರೆ ನಿಮಗೆ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ.
ಲೆಕ್ಕಪರಿಶೋಧನೆಯ ಅಗತ್ಯವಿಲ್ಲದವರು ಮತ್ತು ವೇತನ ಪಡೆಯುವ ಉದ್ಯೋಗಿಗಳು ಜುಲೈ 31ರೊಳಗೆ ಐಟಿಆರ್ ಸಲ್ಲಿಸಬೇಕು. ತೆರಿಗೆದಾರರ ಖಾತೆಗಳನ್ನು ಆಡಿಟ್ ಮಾಡಲು ಅಕ್ಟೋಬರ್ 31ರವರೆಗೂ ಸಮಯವಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ ಸರ್ಕಾರ ಗಡುವನ್ನು ವಿಸ್ತರಿಸಿದೆ. ಆದರೆ ಈ ಬಾರಿ ವಿಸ್ತರಣೆ ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದೆ.
ಸಮಯಕ್ಕೆ ಸರಿಯಾಗಿ ಆದಾಯ ತೆರಿಗೆ ರಿಟರ್ನ್ಸ್ ಏಕೆ ಸಲ್ಲಿಸಬೇಕು ?
ಗಡುವು ಮುಗಿಯುವುದರೊಳಗೆ ನಿಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಲು ವಿಫಲವಾದರೆ 10,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಜುಲೈ 31ರ ನಂತರ ವಿಳಂಬ ಮಾಡಿದ್ರೆ 1961ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 234A ಪ್ರಕಾರ ಪಾವತಿಸಬೇಕಾದ ತೆರಿಗೆಯ ಮೇಲೆ ಬಡ್ಡಿಯನ್ನು ಆಕರ್ಷಿಸಬಹುದು. ಐಟಿಆರ್ ಸಲ್ಲಿಕೆಯಲ್ಲಿ ವಿಳಂಬ ಅಥವಾ ವಿಫಲವಾದರೆ ಇಲಾಖೆಯಿಂದ ನೋಟಿಸ್ ಬರಬಹುದು. ಇದರಿಂದ ನಿಮಗೆ ಕಾನೂನು ಸಮಸ್ಯೆಗಳಾಗುತ್ತವೆ. I-T ಇಲಾಖೆ ನೋಟೀಸ್ ನೀಡಿ ತೃಪ್ತವಾಗದೇ ಇದ್ದರೆ ಮತ್ತು ಅದು ಮಾನ್ಯವಾದ ಅಂಶವನ್ನು ಹೊಂದಿದೆ ಎಂದು ನಿರ್ಧರಿಸಿದರೆ ಪ್ರಕರಣ ಕೋರ್ಟ್ ಮೆಟ್ಟಿಲೇರಬಹುದು.
ಸಮಯಕ್ಕೆ ಸರಿಯಾಗಿ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಪ್ರಯೋಜನಗಳು
ಸುಲಭ ಸಾಲ ಮಂಜೂರಾತಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಲ್ಲಿ ನಿಷ್ಕಳಂಕ ದಾಖಲೆಯನ್ನು ಹೊಂದಿದ್ದರೆ ಸಾಲದಾತರಿಂದ ಸಾಲವನ್ನು ಅನುಮೋದಿಸುವುದು ಸುಲಭವಾಗುತ್ತದೆ. ಆದಾಯವನ್ನು ಪರಿಶೀಲಿಸಲು ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಸಾಲಗಾರರಿಂದ ಐಟಿಆರ್ ಅನ್ನು ಬ್ಯಾಂಕ್‌ಗಳು ಕೇಳುತ್ತವೆ. ಅಧಿಕೃತವಾಗಿ ಸಾಲವನ್ನು ಅನುಮೋದಿಸಲು ಹಣಕಾಸು ಸಂಸ್ಥೆಗಳಿಗೆ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕು. ತೆರಿಗೆ ರಿಟರ್ನ್ಸ್ ಸಲ್ಲಿಸದವರಿಗೆ ಸಾಂಸ್ಥಿಕ ಸಾಲದಾತರಿಂದ ಸಾಲಗಳನ್ನು ಅನುಮೋದಿಸಲು ಕಷ್ಟವಾಗಬಹುದು.
ನಷ್ಟ ತಪ್ಪಿಸಬಹುದು: ಗಡುವಿನ ಮೊದಲು ITR ಸಲ್ಲಿಸಿದರೆ ಆದಾಯ ತೆರಿಗೆ ನಿಯಮಗಳು ಮುಂದಿನ ಆರ್ಥಿಕ ವರ್ಷಕ್ಕೆ ನಷ್ಟವನ್ನು ಸಾಗಿಸಲು ಅನುಮತಿಸುತ್ತವೆ. ತೆರಿಗೆದಾರರು ತಮ್ಮ ಭವಿಷ್ಯದ ಆದಾಯದ ಮೇಲೆ ಕಡಿಮೆ ತೆರಿಗೆಯನ್ನು ಪಾವತಿಸಲು ಇದು ಅನುವು ಮಾಡಿಕೊಡುತ್ತದೆ.
ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಹೇಗೆ ?
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಈಗ ಸರಳ. ಆನ್‌ಲೈನ್ ಫೈಲಿಂಗ್ ಅಥವಾ ಇ-ಫೈಲಿಂಗ್ ಮೂಲಕ ಸುಲಭವಾಗಿ ಈ ಪ್ರಕ್ರಿಯೆ ನಡೆಸಬಹುದು. ತ್ವರಿತವಾಗಿ ಮತ್ತು ನಿಮ್ಮ ಮನೆ ಅಥವಾ ಕಚೇರಿಯಿಂದ್ಲೇ ಐಟಿಆರ್ ಸಲ್ಲಿಸಬಹುದು.
ಇ-ಫೈಲಿಂಗ್ ಪೋರ್ಟಲ್ ಮೂಲಕ ನಿಮ್ಮ ITR ಸಲ್ಲಿಸಲು ವಿವರ
ಮೊದಲು ಇ-ಫೈಲಿಂಗ್ ವೆಬ್‌ಸೈಟ್, https://www.incometax.gov.in/iec/foportal ಗೆ ವಿಸಿಟ್ ಮಾಡಿ.
ನೀವು ಈಗಾಗಲೇ ನೋಂದಾಯಿಸಿದ್ದರೆ ಅಥವಾ ಅಗತ್ಯವಿರುವ ವೈಯಕ್ತಿಕ ಮತ್ತು ಸಂವಹನ ವಿವರಗಳನ್ನು ಒದಗಿಸುವ ಮೂಲಕ ಹೊಸ ನೋಂದಣಿಯನ್ನು ರಚಿಸಿದ್ದರೆ ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ.
ಒಮ್ಮೆ ಪೋರ್ಟಲ್‌ಗೆ ಲಾಗ್ ಇನ್ ಮಾಡಿದ ನಂತರ, “ಇ-ಫೈಲ್” ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ “ಫೈಲ್ ಇನ್ಕಮ್ ಟ್ಯಾಕ್ಸ್ ರಿಟರ್ನ್” ಮೇಲೆ ಕ್ಲಿಕ್ ಮಾಡಿ. ಮೌಲ್ಯಮಾಪನ ವರ್ಷವನ್ನು ಆಯ್ಕೆ ಮಾಡಿ ಮತ್ತು “ಕಂಟಿನ್ಯೂ” ಮೇಲೆ ಕ್ಲಿಕ್ ಮಾಡಿ.
ನಿಮ್ಮ ರಿಟರ್ನ್‌ಗಳನ್ನು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಫೈಲ್ ಮಾಡಲು ಬಯಸುತ್ತಿದ್ದೀರಾ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ನಂತರ ಪರ್ಸನಲ್ ಆಯ್ಕೆಯನ್ನು ಕ್ಲಿಕ್ ಮಾಡಿ, ನೀವು ಸಲ್ಲಿಸಲು ಬಯಸುವ ಆದಾಯ ತೆರಿಗೆ ರಿಟರ್ನ್ಸ್ (ITR) ಆಯ್ಕೆಮಾಡಿ.
ಹೆಚ್ಚಿನ ಸಂಬಳ ಪಡೆಯುವ ವ್ಯಕ್ತಿಗಳು ITR -1 ನಮೂನೆಯೊಂದಿಗೆ ತಮ್ಮ ಆದಾಯವನ್ನು ಸಲ್ಲಿಸುತ್ತಾರೆ. ಲಭ್ಯವಿರುವ ಆಯ್ಕೆಗಳಲ್ಲಿ ITR ಅನ್ನು ಸಲ್ಲಿಸಲು ಕಾರಣವನ್ನು ಸೂಚಿಸಲು ನಿಮ್ಮನ್ನು ಮುಂದೆ ಕೇಳಲಾಗುತ್ತದೆ. ನಿಮ್ಮ ಆಯ್ಕೆಯನ್ನು ಸಲ್ಲಿಸಿ ಮತ್ತು ನಿಮ್ಮ ಬ್ಯಾಂಕ್ ವಿವರಗಳನ್ನು ಒದಗಿಸಲು ಅಥವಾ ಅವುಗಳನ್ನು ಮೌಲ್ಯೀಕರಿಸಲು ಮುಂದಿನ ಹಂತಕ್ಕೆ ತೆರಳಿ.
ಡಿಕ್ಲರೇಶನ್ ಟ್ಯಾಬ್ – ತೆರಿಗೆದಾರರು ITR-1 ಫಾರ್ಮ್‌ನಲ್ಲಿ ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ಅವರು ಪ್ರತಿಯಾಗಿ ಒದಗಿಸಿದ ಎಲ್ಲಾ ವಿವರಗಳು ಸರಿಯಾಗಿವೆ ಮತ್ತು ಸಂಪೂರ್ಣವೆಂದು ಪರಿಶೀಲಿಸುವ ಅಗತ್ಯ ಮಾಹಿತಿಯನ್ನು ಘೋಷಣೆಗಳಲ್ಲಿ ಭರ್ತಿ ಮಾಡಬೇಕಾಗುತ್ತದೆ.
ಯಾವುದೇ ದೋಷವನ್ನು ತಪ್ಪಿಸಲು ಸಲ್ಲಿಸಿದ ಮಾಹಿತಿಯನ್ನು ಪರಿಶೀಲಿಸಿ ಮತ್ತು “ಮೌಲ್ಯೀಕರಿಸಲು ಮುಂದುವರಿಯಿರಿ” ಕ್ಲಿಕ್ ಮಾಡಿ. ಒಮ್ಮೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ ನಂತರ, ತೆರಿಗೆದಾರರು ITR ಫೈಲಿಂಗ್ ಅನ್ನು ಪರಿಶೀಲಿಸುವ SMS/ ಇಮೇಲ್ ಸೂಚನೆಯನ್ನು ಸ್ವೀಕರಿಸುತ್ತಾರೆ.
ಆದಾಯ ತೆರಿಗೆ ರಿಟರ್ನ್ ಡೌನ್‌ಲೋಡ್ ಮಾಡುವುದು ಹೇಗೆ ?
ಕೊನೆಯ ಕ್ಷಣದಲ್ಲಿ ಒತ್ತಡ ಮತ್ತು ದಂಡವನ್ನು ತಡೆಗಟ್ಟಲು ಸಮಯಕ್ಕೆ ITR ಸಲ್ಲಿಸಬೇಕು. ಐಟಿಆರ್ ಅನ್ನು ನೀವು ಸಲ್ಲಿಸಿದ ನಂತರ ಐಟಿ ಇಲಾಖೆಯು ಆದಾಯ ತೆರಿಗೆ ಪರಿಶೀಲನೆ ಫಾರ್ಮ್ ಅನ್ನು ರಚಿಸುತ್ತದೆ. ಅದರಿಂದ ತೆರಿಗೆದಾರರು ಇ-ಫೈಲಿಂಗ್‌ನ ಸಮಗ್ರತೆಯನ್ನು ದೃಢೀಕರಿಸಬಹುದು.
ಆದಾಯ ತೆರಿಗೆ ರಿಟರ್ನ್ ಪರಿಶೀಲನೆ ಫಾರ್ಮ್ ಡೌನ್‌ಲೋಡ್ ಮಾಡಬಹುದು:
ಆದಾಯ ತೆರಿಗೆ ಇಂಡಿಯಾ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ: https://portal.incometaxindiaefiling.gov.in/e-Filing/UserLogin/LoginHome.html?lang=engಗೆ ಭೇಟಿ ನೀಡಿ ‘ವ್ಯೂ ರಿಟರ್ನ್ಸ್/ ಫಾರ್ಮ್ಸ್’ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಇ-ಫೈಲ್ ಮಾಡಿದ ತೆರಿಗೆ ರಿಟರ್ನ್ಸ್ ಅನ್ನು ವೀಕ್ಷಿಸಬಹುದು.