ಜೈಪುರ: ಇಲ್ಲಿಯ ಕಲೆಕ್ಟರ್ ಮತ್ತು ಐಎಎಸ್ ಅಧಿಕಾರಿ ಪ್ರಕಾಶ್ ರಾಜಪುರೋಹಿತ್ ಅವರು ತಮ್ಮ ಕಚೇರಿಗೆ ಭೇಟಿ ನೀಡಿದ ವಿಶೇಷ ಚೇತನ ವ್ಯಕ್ತಿಯನ್ನು ಹೇಗೆ ನಡೆಸಿಕೊಂಡರು ಎಂಬುದನ್ನು ತೋರಿಸುವ ವಿಡಿಯೋ ಒಂದು ವೈರಲ್ ಆಗಿದೆ. ಸಂಬಂಧಪಟ್ಟ ಅಧಿಕಾರಿಯೊಂದಿಗೆ ವಿಷಯವನ್ನು ಚರ್ಚಿಸುವಾಗ ದಿವ್ಯಾಂಗ ವ್ಯಕ್ತಿ ಮೇಜಿನ ಮೇಲೆ ಕುಳಿತಿರುವುದನ್ನು ಅದು ತೋರಿಸಿದೆ.
ಐಪಿಎಸ್ ದಿನೇಶ್ ಎಂಎನ್ ಅವರು ಟ್ವಿಟ್ಟರ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ದೂರುದಾರರು ಕೈ ಮೇಲೆ ನಡೆಯುವುದನ್ನು ನೋಡಿದ ಐಎಎಸ್ ಅಧಿಕಾರಿ ಅವರ ಸ್ಥಿತಿಯನ್ನು ಕಂಡು ಮರುಗಿ, ಆ ವ್ಯಕ್ತಿಯನ್ನು ಮೇಜಿನ ಮೇಲೆ ಕುಳ್ಳರಿಸಿಕೊಂಡರು. ಅವರ ಪ್ರಕರಣವನ್ನು ಮನಃಪೂರ್ವಕವಾಗಿ ಕೇಳಿದರು. ಓಂಪ್ರಕಾಶ್ ಕುಮಾವತ್ ಎಂದು ಗುರುತಿಸಲಾದ ದಿವ್ಯಾಂಗನನ್ನು ಮೇಜಿನ ಮೇಲೆ ಆರಾಮವಾಗಿ ಕುಳಿತುಕೊಳ್ಳುವಂತೆ ಮಾಡಲಾಯಿತು.
ಮಾರ್ಚ್ 16 ರಂದು ಜಿಲ್ಲಾ ಪರಿಷತ್ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ವಿಚಾರಣೆ ವೇಳೆ ಕಿಶನ್‌ಗಡ್ ರೆನ್ವಾಲ್‌ನ ನಿವಾಸಿ ಕುಮಾವತ್ ಅವರು ಜಿಲ್ಲಾಧಿಕಾರಿ ಭೇಟಿಗೆ ಬಂದಿದ್ದರು.
ಕುಮಾವತ್ ಅವರು ತಾವು ದಿವ್ಯಾಂಗರು ರಸ್ತೆಗಳಲ್ಲಿ ವಿಶೇಷವಾಗಿ ಮಳೆಯ ಸಮಯದಲ್ಲಿ ಪ್ರಯಾಣಿಸಲು ಬಹಳಷ್ಟು ತೊಂದರೆಗಳನ್ನು ಎದುರಿಸುತ್ತಿರುವ ಬಗ್ಗೆ ತಿಳಿಸಿದರು.
“ನಮ್ಮ ಮನೆಯ ಮುಂಭಾಗದ ರಸ್ತೆಯು ಎತ್ತರದಲ್ಲಿದೆ, ಹೀಗಾಗಿ, ಮನೆಯಲ್ಲಿ ನೀರು ಸಂಗ್ರಹಗೊಂಡು ಹೊರಗೆ ಹೋಗಲು ತೊಂದರೆಯಾಗುತ್ತದೆ. ಇದು ಅನೇಕ ರೋಗಗಳಿಗೆ ಅಪಾಯವನ್ನುಂಟುಮಾಡುತ್ತದೆ” ಎಂದು ಅವರು ಹೇಳಿದರು. ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ, ಸಮಸ್ಯೆಯನ್ನು ಪರಿಶೀಲಿಸಿ ಶೀಘ್ರವೇ ಪರಿಹರಿಸುವುದಾಗಿ ಭರವಸೆ ನೀಡಿದರು.