ಭಾರತದ ಎರಡನೇ ಶ್ರೀಮಂತ ಎಂಬ ಹೆಗ್ಗಳಿಕೆ ಹೊಂದಿದ್ದ ಅದಾನಿ ಗ್ರೂಪ್ ನ ಗೌತಮ್ ಅದಾನಿ, ಹಿಂಡನ್ ಬರ್ಗ್ ವರದಿ ಬಳಿಕ ಸಂಪತ್ತಿನಲ್ಲಿ ತೀವ್ರ ಕುಸಿತ ಕಂಡ ಪರಿಣಾಮ ವಿಶ್ವ ಸಿರಿವಂತರ ಪಟ್ಟಿಯಿಂದ ಹೊರ ಬಿದ್ದಿದ್ದರು. ಆದರೆ ಆ ಬಳಿಕ ಮತ್ತೆ ಅದಾನಿ ಗ್ರೂಪ್ ಷೇರುಗಳು ಚೇತರಿಕೆ ಕಂಡಿದ್ದು, ವಿಶ್ವದ ಟಾಪ್ 20 ಶ್ರೀಮಂತರ ಪಟ್ಟಿಯಲ್ಲಿ 19ನೇ ಸ್ಥಾನ ಪಡೆದಿದ್ದರು.
ಅಲ್ಲದೆ ಗೌತಮ್ ಅದಾನಿ ಏಷ್ಯಾದ ಎರಡನೇ ಅತಿ ಶ್ರೀಮಂತ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದು, ಇದೀಗ ಆ ಸ್ಥಾನಕ್ಕೆ ಚೀನಾದ ಬಿಲಿಯನೇರ್ ಜಾಂಗ್ ಶಾನ್ಶನ್ ಲಗ್ಗೆ ಇಟ್ಟಿದ್ದಾರೆ. ಕಳೆದ ವಾರ ಗೌತಮ್ ಅದಾನಿ ಅವರ ನಿವ್ವಳ ಮೌಲ್ಯವು ಕಡಿಮೆಯಾದ ಪರಿಣಾಮ ಅವರ ಸಂಪತ್ತಿನಲ್ಲಿ ಇಳಿಕೆಯಾಗಿದ್ದು, ಗೌತಮ್ ಅದಾನಿ ಈಗ ಏಷ್ಯಾದ ಮೂರನೇ ಶ್ರೀಮಂತರಾಗಿದ್ದಾರೆ.
ಇನ್ನು ಭಾರತದ ಅತಿ ಸಿರಿವಂತ ಎಂಬ ಹೆಗ್ಗಳಿಕೆ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ನ ಮುಖೇಶ್ ಅಂಬಾನಿ, ಏಷ್ಯಾದ ಅತಿ ಶ್ರೀಮಂತರ ಪಟ್ಟಿಯಲ್ಲೂ ಮೊದಲ ಸ್ಥಾನದಲ್ಲಿದ್ದಾರೆ. ಮುಖೇಶ್ ಅಂಬಾನಿ ವಿಶ್ವ ಕುಬೇರರ ಟಾಪ್ 20 ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿದ್ದು, 19ನೇ ಸ್ಥಾನದಲ್ಲಿರುವ ಗೌತಮ್ ಅದಾನಿ ಅವರ ಸಂಪತ್ತಿನಲ್ಲಿ ಮತ್ತಷ್ಟು ಇಳಿಕೆಯಾದರೆ ಈ ಪಟ್ಟಿಯಿಂದ ಹೊರಬೀಳಲಿದ್ದಾರೆ.