ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಈಶ್ವರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ನಿಶ್ಚಿತವಾಗಿದೆ. ಇದರ ಮಧ್ಯೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಈಶ್ವರಪ್ಪ ರಾಜೀನಾಮೆ ನೀಡುವ ಅಗತ್ಯವಿಲ್ಲ. ಯಾವ ʼಮಹಾನಾಯಕʼ ಈ ಹಿಂದೆ ನನ್ನ ವಿರುದ್ದ ಸಿಡಿ ಷಡ್ಯಂತ್ರ ಮಾಡಿದ್ದರೋ ಅವರೇ ಈ ಪ್ರಕರಣದ ಹಿಂದೆಯೂ ಇದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದರು.
ಅಲ್ಲದೇ ತಾವು ಈ ಕುರಿತಂತೆ ಸದ್ಯದಲ್ಲೇ ಪತ್ರಿಕಾಗೋಷ್ಟಿ ನಡೆಸಿ ಎಲ್ಲವನ್ನೂ ಬಿಚ್ಚಿಡುವುದಾಗಿ ರಮೇಶ್ ಜಾರಕಿಹೊಳಿ ಗುಡುಗಿದ್ದರು. ರಮೇಶ್ ಜಾರಕಿಹೊಳಿ ʼಮಹಾನಾಯಕʼ ಎಂದು ಪರೋಕ್ಷವಾಗಿ ಹೇಳಿದ್ದರೂ ಅದು ಡಿ.ಕೆ. ಶಿವಕುಮಾರ್ ಅವರನ್ನೇ ಗುರಿಯಾಗಿಸಿಕೊಂಡಿದ್ದು ಎಂಬುದು ಎಲ್ಲರಿಗೂ ಅರಿವಾಗಿತ್ತು. ಇದೀಗ ರಮೇಶ್ ಜಾರಕಿಹೊಳಿ ಹೇಳಿಕೆಗೆ ಡಿಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಯಾರು ಈಗಾಗಲೇ ಏನೆಲ್ಲಾ ಬಿಚ್ಚಿಟ್ಟಿದ್ದಾರೆಂಬುದನ್ನು ಎಲ್ಲರೂ ನೋಡಿದ್ದಾರೆ. ಇನ್ನು ಏನೇನೂ ಬಿಚ್ಚಿಡುತ್ತಾರೋ ನೋಡೋಣಾ ಎಂದು ವ್ಯಂಗ್ಯವಾಡಿದ್ದಾರೆ. ಇಂತಹ ಹೇಳಿಕೆಗಳಿಗೆಲ್ಲಾ ನಾನು ಜಗ್ಗುವುದಿಲ್ಲ. ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ದ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.