ರಾಜ್ಯದಾದ್ಯಂತ ಬಿರು ಬಿಸಿಲು ಆರಂಭವಾಗಿದೆ. ಬಿಸಿಲಿನ ಝಳಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಇದರ ಮಧ್ಯೆ ಈ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆ ಸೇರಿದಂತೆ ಕೆಲವೆಡೆ ಕಾಣಿಸಿಕೊಳ್ಳುವ ಮಂಗನ ಕಾಯಿಲೆ ಕುರಿತೂ ಆತಂಕ ಶುರುವಾಗಿದೆ. ಹಾಗಾದ್ರೆ ಏನಿದು ಮಂಗನ ಕಾಯಿಲೆ ? ಅದರ ಲಕ್ಷಣಗಳೇನು ? ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
1957 ರಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕ್ಯಾಸನೂರು ಕಾಡಿನಲ್ಲಿ ಮೊದಲ ಬಾರಿಗೆ ಈ ರೋಗ ಪತ್ತೆಯಾಗಿದ್ದು, ಸಾಮಾನ್ಯವಾಗಿ ದಟ್ಟವಾದ ಅರಣ್ಯ ಪ್ರದೇಶಗಳಿರುವ ಭಾಗಗಳಲ್ಲಿ ಈ ಕಾಯಿಲೆ ಕಂಡು ಬರುತ್ತದೆ.
ಕಾಡಿನ ರಕ್ತಹೀರುವ ಉಣ್ಣೆಗಳು ರೋಗಕಾರಕ ವೈರಸ್ ಗಳನ್ನು ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಅಂಟಿಸುತ್ತದೆ. ರೋಗಗ್ರಸ್ತ ಪ್ರಾಣಿಯ ರಕ್ತ ಹೀರಿದ ಉಣ್ಣೆಗಳು ರೋಗವಾಹಕಗಳಾಗಿ ಪ್ರಾಣಿಯಿಂದ ಪ್ರಾಣಿಗೆ ರೋಗ ತಗಲಿಸುವ ಕಾರ್ಯ ನಿರ್ವಹಿಸುತ್ತವೆ. ಅಷ್ಟೇ ಅಲ್ಲ. ರೋಗಾಣುಯುಕ್ತ ಉಣ್ಣೆಗಳು ಇಡುವ ಮೊಟ್ಟೆ ಮತ್ತು ಮರಿಗಳೂ ಸಹ ವೈರಸ್ ಸಂತತಿಯನ್ನು ಮುಂದುವರೆಸುತ್ತವೆ. ಅದರಲ್ಲೂ ಮಂಗಗಳಿಗೆ ಇದು ತಗುಲಿ ಅವುಗಳು ಮೃತಪಟ್ಟ ಬಳಿಕ ಇವು ಕಾಡಿಗೆ ಬರುವ ಜಾನುವಾರುಗಳ ದೇಹ ಸೇರುತ್ತವೆ. ಬಳಿಕ ಮನುಷ್ಯನ ಸಂಪರ್ಕಕ್ಕೆ ಬಂದು ಆತನನ್ನು ಬಾಧಿಸುತ್ತದೆ. ಮಂಗನ ಕಾಯಿಲೆ ಒಬ್ಬ ಮನುಷ್ಯನಿಂದ ಮತ್ತೊಬ್ಬರಿಗೆ ಹರಡುವುದಿಲ್ಲ.
ಬೇಸಿಗೆಯಲ್ಲಿ ‘ಕುಲು’ ಗೆ ಭೇಟಿ ನೀಡಲೇಬೇಕು
ಈ ಕೆ.ಎಫ್.ಡಿ.(ಕ್ಯಾಸನೂರು ಫಾರೆಸ್ಟ್ ಡಿಸೀಸ್) ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಂಗನ ಕಾಯಿಲೆ ನಿರೋಧಕ ಲಸಿಕೆ ಹಾಕಿಸಿಕೊಳ್ಳುವುದು ಸೂಕ್ತ. ಈ ಸೋಂಕಿನ ಬಾಧೆಗೆ ಒಳಗಾದ ವ್ಯಕ್ತಿಗೆ ತೀವ್ರವಾದ ಜ್ವರ, ತಲೆನೋವು, ಮೈ-ಕೈ ನೋವು, ಮೆದುಳಿನ ಉರಿಯೂತದಿಂದ ಮಂಪರು, ಕುತ್ತಿಗೆಯಲ್ಲಿ ಬಿಗಿಯುವಿಕೆ ಕಾಣಿಸಿಕೊಳ್ಳುತ್ತದೆ. ಈ ಖಾಯಿಲೆಯ ಲಕ್ಷಣ ಕಂಡು ಬಂದ ನಂತರ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು.
ಬಹು ಮುಖ್ಯವಾಗಿ ಅಕಾಲಿಕವಾಗಿ ಸಾವನ್ನಪ್ಪಿದ ಮಂಗಗಳು ಕಂಡು ಬಂದಲ್ಲಿ ತಕ್ಷಣ ಅವುಗಳನ್ನು ಸುಡುವುದರ ಮುಖಾಂತರ ವೈರಾಣು ಹರಡದಂತೆ ನೋಡಿಕೊಳ್ಳಬೇಕು. ಕಾಯಿಲೆ ಆರಂಭಗೊಂಡಾಗ ಕೃಷಿಕರು ಕಾಡಿಗೆ ಹೋಗುವುದನ್ನು ಬಿಡಬೇಕು. ಅನಿವಾರ್ಯವಾಗಿ ಕಾಡಿಗೆ ಹೋಗಲೇಬೇಕಾದರೆ ಮೈತುಂಬಾ ಬಟ್ಟೆ ಕಾಲಿಗೆ ಬೂಟು, ಕೈಗೆ ಗ್ಲೌಸ್, ತಲೆಗೆ ಟೋಪಿ ಧರಿಸಿಕೊಳ್ಳಬೇಕು. ತಮ್ಮ ಮತ್ತು ತಮ್ಮ ಜಾನುವಾರುಗಳ ಮೈಗೆ ಉಣ್ಣೆ ನಾಶಕ ಪುಡಿ ಲೇಪಿಸಿಕೊಳ್ಳಬೇಕು. ಕಾಡಿನಲ್ಲಿ ಕೂರುವುದು, ಮಲಗುವುದು, ಅನಾವಶ್ಯಕ ತಿರುಗಾಡುವುದು ಸಲ್ಲದು. ಕಾಡಿನಿಂದ ಹಿಂದಿರುಗಿದ ತಕ್ಷಣ ಸ್ನಾನ ಮಾಡಬೇಕು. ಜಾನುವಾರುಗಳ ಮೈಗೆ ಹತ್ತಿದ ಉಣ್ಣೆಗಳನ್ನು ಕಿತ್ತೆಸೆಯಬೇಕು.