ಬಳ್ಳಾರಿ: ಜಿಲ್ಲಾಡಳಿತದ ಎಡವಟ್ಟಿನಿಂದಾಗಿ ವಿದ್ಯಾರ್ಥಿಗಳು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ, ಶಾಲಾ-ಕಾಲೇಜುಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದಂತೆ ಜಿಲ್ಲಾಡಳಿತ ಏಕಾಏಕಿ ಹಾಸ್ಟೆಲ್ ಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ವಿದ್ಯಾರ್ಥಿಗಳು ರಸ್ತೆಯಲ್ಲಿ ಪರದಾಡುವ ಸ್ಥಿತಿ ಬಂದಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಪ್ರತ್ಯೇಕ ಮಾರ್ಗಸೂಚಿ ಜಾರಿಗೊಳಿಸಿದ್ದು, ಹಾಸ್ಟೆಲ್ ಗಳನ್ನು ಕೂಡ ಬಂದ್ ಮಾಡಲಾಗಿದೆ. ಇದ್ದಕ್ಕಿದ್ದಂತೆ ಹಾಸ್ಟೆಲ್ ಗಳಿಗೆ ಬೀಗ ಹಾಕಿದ ಹಿನ್ನೆಲೆಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ದಿಕ್ಕುತೋಚದಂತಾಗಿದೆ.
ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಊರುಗಳಿಗೆ ತೆರಳಲು ಬಸ್ ವ್ಯವಸ್ಥೆ ಕೂಡ ಸಮರ್ಪಕವಾಗಿಲ್ಲ. ಕೆಲವರು ಹಾಸ್ಟೆಲ್ ಮುಂದೆಯೇ ಕುಳಿತು ಕಾಲ ಕಳೆಯುತ್ತಿದ್ದರೆ ಇನ್ನು ಕೆಲ ವಿದ್ಯಾರ್ಥಿಗಳು ಲಾಡ್ಜ್ ಗಳ ಮೊರೆ ಹೋಗಿದ್ದಾರೆ.
ಏಕಾಏಕಿ ಹಾಸ್ಟೆಲ್ ಬಂದ್ ಮಾಡಿರುವ ಜಿಲ್ಲಾಡಳಿತದ ಕ್ರಮಕ್ಕೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಬಸ್ ಗಳ ವ್ಯವಸ್ಥೆ ಮಾಡಿ ಊರಿಗೆ ತಲುಪಿಸುವ ವ್ಯವಸ್ಥೆಯನ್ನಾದರೂ ಮಾಡುವಂತೆ ಆಗ್ರಹಿಸಿದ್ದಾರೆ.