ಏಕರೂಪ ನಾಗರಿಕ ಸಂಹಿತೆ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಈ ಮಧ್ಯೆ ಅಲಹಾಬಾದ್ ಹೈಕೋರ್ಟ್ ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಗೆ ಹೊಸ ತಿರುವು ನೀಡಿದೆ. ಏಕರೂಪ ನಾಗರಿಕ ಸಂಹಿತೆ ಜಾರಿಯನ್ನು ಪರಿಗಣಿಸುವಂತೆ ಅಲಹಾಬಾದ್ ಹೈಕೋರ್ಟ್, ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಏಕರೂಪ ನಾಗರಿಕ ಸಂಹಿತೆ ಈಗ ದೇಶದಲ್ಲಿ ಅಗತ್ಯವಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಸಂವಿಧಾನದ 44 ನೇ ವಿಧಿಯು, ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕನಿಗೆ ಧರ್ಮ ಅಥವಾ ಜಾತಿಯನ್ನು ಲೆಕ್ಕಿಸದೆ ಸಾಮಾನ್ಯ ಕಾನೂನು ಇರಬೇಕೆಂದು ಹೇಳುತ್ತದೆ. ಏಕರೂಪ ನಾಗರಿಕ ಸಂಹಿತೆಯಲ್ಲಿ ಮದುವೆ, ವಿಚ್ಛೇದನ ಹಾಗೂ ಆಸ್ತಿ ಹಂಚಿಕೆಯಲ್ಲಿ ಎಲ್ಲ ಧರ್ಮದವರಿಗೂ ಒಂದೇ ಕಾನೂನು ಅನ್ವಯವಾಗಬೇಕು ಎಂದು ಹೇಳಲಾಗಿದೆ.
ಪ್ರಕರಣವೊಂದರ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್, ಏಕರೂಪ ನಾಗರಿಕ ಸಂಹಿತೆ ದೇಶದಲ್ಲಿ ಈಗ ಅಗತ್ಯವಾಗಿದೆ ಎಂದಿದೆ. ಇದನ್ನು ಕಡ್ಡಾಯವಾಗಿ ತರಬೇಕು ಎಂದು ಕೋರ್ಟ್ ಹೇಳಿದೆ.
ಮದುವೆ ನೋಂದಣಿ ಭದ್ರತೆಗೆ ಸಂಬಂಧಿಸಿದಂತೆ ಕೆಲ ದಂಪತಿ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ, ನ್ಯಾಯಮೂರ್ತಿ ಸುನೀತ್ ಕುಮಾರ್ ನೇತೃತ್ವದ ಪೀಠ ಈ ಹೇಳಿಕೆ ನೀಡಿದೆ. ಸಂಸತ್ ನಲ್ಲಿ ಏಕ ಕುಟುಂಬ ಸಂಹಿತೆ ಜಾರಿಗೆ ತರುವ ಅಗತ್ಯವಿದೆ ಎಂದವರು ಹೇಳಿದ್ದಾರೆ.
ಅಂತರ್-ಧರ್ಮೀಯ ದಂಪತಿ ಅಪರಾಧಿಯಾಗುವುದನ್ನು ತಪ್ಪಿಸಬೇಕಿದೆ. ಇದಕ್ಕೆ ಸಂಸತ್ ಮಧ್ಯಪ್ರವೇಶ ಮಾಡುವ ಅಗತ್ಯವಿದೆ ಹಾಗೂ ವಿವಾಹ ನೋಂದಣಿಗೆ ಸಂಬಂಧಿಸಿದಂತೆ ಬೇರೆ ಬೇರೆ ಕಾನೂನು ಜಾರಿಯಲ್ಲಿರಬೇಕಾ? ಒಂದೇ ಕಾನೂನು ಮಾಡಬೇಕಾ ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಬೇಕೆಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಆದರೆ, ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ವಕೀಲರು, ಅರ್ಜಿದಾರರು ತಮ್ಮ ಸಂಗಾತಿಯ ಧರ್ಮವನ್ನು ಪರಿವರ್ತಿಸುವ ಮೊದಲು ಜಿಲ್ಲಾಧಿಕಾರಿಗಳಿಂದ ಕಡ್ಡಾಯವಾಗಿ ಅನುಮೋದನೆ ಪಡೆಯಬೇಕು. ಆದ್ರೆ ಅನುಮೋದನೆ ಪಡೆದಿಲ್ಲವಾದ ಕಾರಣ, ಜಿಲ್ಲಾ ಪ್ರಾಧಿಕಾರದ ತನಿಖೆಯಿಲ್ಲದೆ ಅವರ ವಿವಾಹವನ್ನು ನೋಂದಾಯಿಸಲು ಸಾಧ್ಯವಿಲ್ಲ ಎಂದರು. ಅರ್ಜಿದಾರರ ಪರ ವಕೀಲರು, ನಾಗರಿಕರು ತಮ್ಮ ಸಂಗಾತಿ ಮತ್ತು ಧರ್ಮವನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದಾರೆ. ಸ್ವಂತ ಇಚ್ಛೆಯ ಮೇರೆಗೆ ಮತಾಂತರ ನಡೆದಿದೆ ಎಂದರು.
ಈ ವರ್ಷ ಜುಲೈನಲ್ಲಿ, ದೆಹಲಿ ಹೈಕೋರ್ಟ್ ಕೂಡ ಈ ಬಗ್ಗೆ ಮಾತನಾಡಿತ್ತು. ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಪ್ರತಿಕ್ರಿಯಿಸಿದ ಹೈಕೋರ್ಟ್, ಸರ್ಕಾರವು ಏಕರೂಪದ ಕಾನೂನಿನ ದಿಕ್ಕಿನಲ್ಲಿ ಯೋಚಿಸಬೇಕು ಎಂದಿತ್ತು.