ಏಕನಾಥ್ ಶಿಂಧೆ ಬಂಡಾಯದ ಬಳಿಕ ಅಧಿಕಾರವನ್ನು ಕಳೆದುಕೊಂಡಿರುವ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ಹೇಗಾದರೂ ಮಾಡಿ ಶಿಂಧೆ ಸಿಎಂ ಗದ್ದುಗೆಗೆ ಸಂಕಷ್ಟ ತರಲು ಕಾನೂನು ಹೋರಾಟಕ್ಕೆ ಮುಂದಾಗಿದೆ. ಏಕನಾಥ್ ಶಿಂಧೆ ಹಾಗೂ ಇನ್ನುಳಿದ ಬಂಡಾಯ ನಾಯಕರನ್ನು ಅಮಾನತುಗೊಳಿಸುವಂತೆ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಶಿವಸೇನೆ ನೇತೃತ್ವದ ಸರ್ಕಾರವನ್ನು ಉರುಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವ ಶಿಂಧೆ ಬಣದಲ್ಲಿರುವ ಒಟ್ಟು 16 ಶಾಸಕರ ವಿರುದ್ಧ ಸಲ್ಲಿಸಲಾದ ಅನರ್ಹತೆ ಅರ್ಜಿಗಳನ್ನು ಉಪಸಭಾಪತಿ ನಿರ್ಧರಿಸುವವರೆಗೂ ಇವರನ್ನು ಅಮಾನತುಗೊಳಿಸಬೇಕು ಎಂದು ಮಹಾ ವಿಕಾಸ್ ಅಘಾಡಿ ಮೈತ್ರಿಕೂಟವು ಸುಪ್ರೀಂ ಕೋರ್ಟ್ನಲ್ಲಿ ಮನವಿ ಮಾಡಿದೆ.
16 ಮಂದಿ ಬಂಡಾಯ ಶಾಸಕರ ವಿರುದ್ಧ ಶಿವಸೇನೆಯು ಅನರ್ಹತಾ ಅರ್ಜಿಗಳನ್ನು ಸಲ್ಲಿಸಿದೆ. ಇವರ ಅನರ್ಹತೆಯ ಬಗ್ಗೆ ಸದನದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವವರೆಗೂ ಏಕನಾಥ್ ಶಿಂಧೆ ಸೇರಿದಂತೆ ಎಲ್ಲಾ ಬಂಡಾಯ ಶಾಸಕರು ಸದನ ಪ್ರವೇಶಿಸದಂತೆ ಅಥವಾ ಸದನದ ಯಾವುದೇ ಕಾರ್ಯಗಳಲ್ಲಿಯೂ ಭಾಗಿಯಾಗದಂತೆ ಅಮಾನತುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇವೆ ಎಂದು ಶಿವಸೇನೆ ಮುಖ್ಯ ಸಚೇತಕ ಸುನೀಲ್ ಪ್ರಭು ಹೇಳಿದ್ದಾರೆ.