ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಲೆ, ಭ್ರಷ್ಟಾಚಾರ ನಿಗ್ರಹ ದಳದ ಕಣ್ಣು ಬಿದ್ದಿದೆ. ಫೆಬ್ರವರಿ ತಿಂಗಳ ಕೊನೆಯಲ್ಲಿ ಪಾಲಿಕೆ ಮೇಲೆ ದಾಳಿ ನಡೆಸಿದ್ದ ಎಸಿಬಿ ಪಾಲಿಕೆಯ ಮೇಲೆ ರೈಡ್ ನಡೆಸಿ ಕಡತಗಳನ್ನು ವಶಪಡಿಸಿಕೊಂಡಿತ್ತು. ಭ್ರಷ್ಟಾಚಾರದ ವಾಸನೆ ಬಂದ ಕಡೆ ಸ್ಥಳ ಪರಿಶೀಲನೆ ನಡೆಸಿತ್ತು. ಈಗಲೂ ಎಸಿಬಿಯು ಕಡತಗಳ ಪರಿಶೀಲನೆ ಮುಂದುವರೆಸಿದ್ದು, ಪಾಲಿಕೆ ವಿರುದ್ಧ ದೂರುಗಳು ಹರಿದು ಬರುತ್ತಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಹೌದು, ಪಾಲಿಕೆ ವಿರುದ್ಧ ಎಸಿಬಿಗೆ ನೂರಾರು ಸಂಖ್ಯೆಯಲ್ಲಿ ದೂರುಗಳು ಹರಿದು ಬರುತ್ತಿವೆ ಎಂದು ತಿಳಿದು ಬಂದಿದೆ. ಈ ದೂರುಗಳು ಮುಖ್ಯವಾಗಿ ಟಿಡಿಆರ್, ಡಿಆರ್ಸಿಗೆ ಸಂಬಂಧಪಟ್ಟಿವೆ ಎಂದು ಎಸಿಬಿ ವಲಯದಿಂದ ಮಾಹಿತಿ ಲಭ್ಯವಾಗಿದೆ.
ಇದೀಗ ಎಸಿಬಿ 2018 ರಿಂದ 2022ರ ವರೆಗಿನ ತೆರಿಗೆ ವಂಚನೆ ಸಂಬಂಧ ಮಾಹಿತಿ ಕಲೆಹಾಕ್ತಿದೆ. ಟ್ಯಾಕ್ಸ್ ವಿಭಾಗದಲ್ಲೇ ಸರಿಸುಮಾರು 1 ಸಾವಿರ ಕೋಟಿಯಷ್ಟು ತೆರಿಗೆ ವಂಚನೆ ಆಗಿರೋದ್ರ ಬಗ್ಗೆ ಎಸಿಬಿ ಮಾಹಿತಿ ನೀಡಿದೆ. ಸಣ್ಣ ಡಿಟೇಲನ್ನು ಮಿಸ್ ಮಾಡಬಾರದು ಎಂದು ಪಣತೊಟ್ಟಿರುವ ಎಸಿಬಿ, ಟೌನ್ ಪ್ಲ್ಯಾನಿಂಗ್ ಹಾಗೂ ಟ್ಯಾಕ್ಸ್ ವಿಭಾಗವನ್ನ ಮರ್ಜ್ ಮಾಡಿ ಕಡತಗಳ ಪರಿಶೀಲನೆಗೆ ಮುಂದಾಗಿದ್ಯಂತೆ.
ಪ್ರಮುಖವಾಗಿ ತೆರಿಗೆ ವಂಚನೆಯ ಬಗ್ಗೆ ಗಮನ ಹರಿಸಿರುವ ಎಸಿಬಿ, 10 ಅಂತಸ್ತಿನ ಕಟ್ಟಡಗಳಿಗಿಂತ ಹೆಚ್ಚು ಮಹಡಿಗಳಿರೋ ಕಟ್ಟಡಗಳನ್ನೇ ಟಾರ್ಗೆಟ್ ಮಾಡಿದೆ. ಎರಡು ಎಕರೆಗೂ ಹೆಚ್ಚು ಜಾಗದಲ್ಲಾದ ಗೋಲ್ಮಾಲನ್ನೇ ಸ್ಕೂಟ್ನಿ ಮಾಡ್ತಿದೆ. ಈವರೆಗೂ ದೊರೆತಿರುವ ಮಾಹಿತಿ ಪ್ರಕಾರ, ಮಾರತ್ತಹಳ್ಳಿ, ವೈಟ್ ಫೀಲ್ಡ್, ಎಚ್ಎಸ್ಆರ್ ಲೇಔಟ್, ಮಹದೇವಪುರ, ಬೊಮ್ಮನಹಳ್ಳಿ ಭಾಗದಲ್ಲೇ ದೊಡ್ಡದೊಡ್ಡ ಕಟ್ಟಡದ ಮಾಲೀಕರಿಂದಲೇ ತೆರಿಗೆ ವಂಚನೆಯಾಗಿದೆ ಎಂದು ತಿಳಿದು ಬಂದಿದೆ.
ಈ ತೆರಿಗೆ ವಂಚಕ ಮಾಲೀಕರು ಹಾಗೂ ಬಿಲ್ಡರ್ ಗಳಿಗೆ, ಸರ್ವೆ ಇಂಜಿನಿಯರ್ ಗಳ ಕುಮ್ಮಕ್ಕಿದೆ. ಅವರ ಸಹಾಯದಿಂದಲೆ ಕಟ್ಟಡ ಮಾಲೀಕರು ಟ್ಯಾಕ್ಸ್ ವಂಚನೆ ಮಾಡಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ. ಎಸಿಬಿ ದಾಳಿ ಮಾಡಿದ ದಿನದಿಂದಲೇ ತೆರಿಗೆ ವಂಚಕರಿಗೆ ಸಹಾಯ ಮಾಡಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳಿಗೆ ನಡುಕ ಶುರುವಾಗಿದ್ದು, ಸಧ್ಯದಲ್ಲೇ ಎಸಿಬಿ ಈ ಅಧಿಕಾರಿಗಳ ನಿಜವಾದ ಮುಖ ಏನು ಎಂಬುದನ್ನು ಬಯಲಿಗೆಳಯಲಿದೆ.