
ಈ ಮುಖ್ಯ ಶಿಕ್ಷಕರ ನಿವೃತ್ತಿಗೆ ಇನ್ನೇನು ಕೆಲವೇ ವರ್ಷಗಳು ಬಾಕಿ ಇದ್ದವು. ಮನೆಯಲ್ಲಿ ಮಗ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ಅಷ್ಟರಲ್ಲೇ ಇವರನ್ನು ವರ್ಗಾವಣೆ ಮಾಡಲಾಗುತ್ತದೆ ಎಂಬ ಸುದ್ದಿ ಇಲಾಖೆಯಿಂದ ಹೊರ ಬಿದ್ದಿದ್ದು, ವರ್ಗಾವಣೆ ಬೇಡ ಎಂದು ಎಷ್ಟೇ ಮನವಿ ಮಾಡಿದರೂ ಮೇಲಾಧಿಕಾರಿಗಳು ಮಾತ್ರ ವರ್ಗಾವಣೆ ಮಾಡಿದ್ದರು. ಈ ಸುದ್ದಿ ಕೇಳುತ್ತಿದ್ದಂತೆ ಹೃದಯಾಘಾತದಿಂದ ಶಿಕ್ಷಕ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ತೆಲಂಗಾಣದ ಮೆಹಬೂಬಾಬಾದ್ ಜಿಲ್ಲೆಯಲ್ಲಿ ನಡೆದಿದ್ದು, 57 ವರ್ಷದ ಬಾನೋತ್ ಜೆತ್ರಾ ಸಾವನ್ನಪ್ಪಿದ ಶಿಕ್ಷಕರು. ಇವರು ಜಿಲ್ಲೆಯ ನೆಲ್ಲಿಕೂದುರು ಮಂಡಲದ ಚಿನ್ನ ಮುಪ್ಪರಂ ಗ್ರಾಮದಲ್ಲಿನ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಮಧ್ಯೆ ಇವರನ್ನು ಪಕ್ಕದ ಮುಲುಗು ಜಿಲ್ಲೆಯ ಶಾಲೆಯೊಂದಕ್ಕೆ ವರ್ಗಾವಣೆ ಮಾಡಲಾಗಿತ್ತು.
ಇವರ ಪತ್ನಿ ಕೂಡ ಶಿಕ್ಷಕರಾಗಿದ್ದು, ಇಬ್ಬರನ್ನೂ ಒಂದೇ ಕಡೆ ವರ್ಗ ಮಾಡಿ ಎಂದು ಮನವಿ ಮಾಡಿದ್ದರು. ಆದರೆ, ಇಲಾಖೆ ಇದಕ್ಕೆ ಸ್ಪಂದಿಸಿರಲಿಲ್ಲ. ಹೀಗಾಗಿ ಅವರು ತೀವ್ರ ಚಿಂತೆಗೆ ಒಳಗಾಗಿದ್ದರು. ಒಂದೆಡೆ ಮನೆಯಲ್ಲಿ ಮಗ ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಇನ್ನೊಂದೆಡೆ ವಯಸ್ಸು ಹೆಚ್ಚಾಗಿದ್ದು, ಪ್ರತಿ ದಿನ ಬೇರೆ ಜಿಲ್ಲೆಗೆ ಹೋಗಿ ಬರಲು ಆಗುವುದಿಲ್ಲ ಎಂದು ಕೊರಗುತ್ತಿದ್ದರು.
ಹೀಗಾಗಿ ಇದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು, ಹೃದಯಾಘಾತವಾಗಿದ್ದ ಸಂದರ್ಭದಲ್ಲಿ ಕುಟುಂಬಸ್ಥರು ಮನೆಯಲ್ಲಿ ಇರಲಿಲ್ಲ. ಆದರೆ, ಕುಟುಂಬಸ್ಥರು ಬರುವ ವೇಳೆಗೆ ಇವರು ಕೋಮಾಕ್ಕೆ ಜಾರಿದ್ದರು. ಕುಟುಂಬಸ್ಥರು ಬರುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟರಲ್ಲಿಯೇ ಶಿಕ್ಷಕ ಸಾವನ್ನಪ್ಪಿದ್ದಾರೆ ಎನ್ನುವುದನ್ನು ವೈದ್ಯರು ಖಚಿತಪಡಿಸಿದ್ದಾರೆ.
30 ವರ್ಷಗಳಿಂದ ಒಂದೇ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದವರನ್ನು ಏಕಾಏಕಿ ಬೇರೆಡೆ ವರ್ಗಾವಣೆ ಮಾಡಲಾಗಿತ್ತು. ಕುಟುಂಬದ ತೊಂದರೆ ಹಾಗೂ ವಯಸ್ಸಿನಿಂದಾಗಿ ಮಾನಸಿಕ ವ್ಯಾಕುಲತೆಗೆ ಒಳಗಾಗಿದ್ದರಿಂದಾಗಿ ಅವರಿಗೆ ಹೃದಯಾಘಾತವಾಗಿದೆ. ಈ ಕುರಿತು ಇಲಾಖೆಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸಾಧ್ಯವಾಗಲಿಲ್ಲ. ಅವರ ಸಾವಿಗೆ ಇಲಾಖೆಯೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.