ಮಾಹಿತಿ ತಂತ್ರಜ್ಞಾನದ ಇಂದಿನ ಯುಗದಲ್ಲಿ ಎಲ್ಲವೂ ಕೂಡ ಡಿಜಿಟಲ್ ಮಯವಾಗಿದೆ. ಅಂಗೈನಲ್ಲೇ ಪ್ರಪಂಚದ ಮಾಹಿತಿ ಸಿಗುತ್ತಿದ್ದು, ಹಣಕಾಸು ವಹಿವಾಟೂ ಸಹ ಇಂಟರ್ನೆಟ್ ಮೂಲಕವೇ ಆಗುತ್ತಿದೆ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಇವುಗಳನ್ನು ‘ಪಾಸ್ವರ್ಡ್’ ಮೂಲಕ ಲಾಕ್ ಮಾಡಿಟ್ಟುಕೊಳ್ಳಬೇಕಾಗುತ್ತದೆ.
ಹೆಚ್ಚಿನ ಮಟ್ಟದ ಸುರಕ್ಷತೆ ದೃಷ್ಟಿಯಿಂದ ಪಾಸ್ವರ್ಡ್ ಗಳನ್ನು ಆದಷ್ಟು ಕಠಿಣವಾಗಿ ಇರಿಸಿ ಎಂದು ಈ ಕ್ಷೇತ್ರದ ತಜ್ಞರು ಪದೇ ಪದೇ ಹೇಳುತ್ತಿರುತ್ತಾರೆ. ಅಲ್ಲದೆ ಸರಳ ಪಾಸ್ವರ್ಡ್ ಗಳನ್ನು ಇರಿಸಿದ ವೇಳೆ ಹ್ಯಾಕರ್ ಗಳು ಅದನ್ನು ಸುಲಭವಾಗಿ ಪ್ರವೇಶಿಸಿ ಮಾಹಿತಿಗಳನ್ನು ಕದಿಯುತ್ತಾರೆ ಎಂದು ಎಚ್ಚರಿಸುತ್ತಲೇ ಬಂದಿದ್ದಾರೆ.
ಜೊತೆಗೆ ಅತ್ಯಂತ ಸುಲಭವಾಗಿ ಹ್ಯಾಕ್ ಮಾಡಬಹುದಾದ ಪಾಸ್ವರ್ಡ್ಗಳ ಪಟ್ಟಿಯನ್ನು ಪ್ರತಿವರ್ಷ ಪ್ರಕಟಿಸುತ್ತಲೇ ಬಂದಿದ್ದು, ಈ ಪೈಕಿ 123456, ಎಬಿಸಿಡಿಇಎಫ್, password ಅತ್ಯಂತ ದುರ್ಬಲ ಪಾಸ್ವರ್ಡ್ಗಳು ಎಂದು ಪರಿಗಣಿಸಲಾಗಿದ್ದು, ಇವುಗಳು ಹಲವು ವರ್ಷಗಳಿಂದ ಇದೇ ಸ್ಥಾನದಲ್ಲಿ ಮುಂದುವರೆದಿವೆ.
ಈ ಬಾರಿಯೂ ಸಂಶೋಧನಾ ಸಂಸ್ಥೆಯೊಂದು ಜಗತ್ತಿನ 200 ದುರ್ಬಲ ಪಾಸ್ವರ್ಡ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅಚ್ಚರಿಯ ಸಂಗತಿ ಎಂದರೆ ಈ ಹಿಂದಿನ ವರ್ಷಗಳಲ್ಲೂ ದುರ್ಬಲ ಪಾಸ್ವರ್ಡ್ಗಳು ಎಂದು ಪರಿಗಣಿಸಲಾಗಿದ್ದ 123456, ಎಬಿಸಿಡಿಇಎಫ್, password ಮೊದಲಾದವುಗಳನ್ನು ಬಳಕೆದಾರರು ಈಗಲೂ ಮುಂದುವರೆಸಿರುವುದು ಅಚ್ಚರಿ ಮೂಡಿಸಿದೆ.