ಶಿವಮೊಗ್ಗ: ಸ್ವಾತಂತ್ರ್ಯ ಬಂದ ನಂತರ ಸಿದ್ದರಾಮಯ್ಯ ಹುಟ್ಟಿದ್ದು. ತುರ್ತು ಪರಿಸ್ಥಿತಿ ಬರುವವರೆಗೂ ಸಿದ್ದರಾಮಯ್ಯ ಕಾಂಗ್ರೆಸ್ ವಿರೋಧ ಮಾಡಿಕೊಂಡು ಬಂದವರು. ತುರ್ತು ಪರಿಸ್ಥಿತಿ ಬಂದಾಗ ಇಂದಿರಾಗಾಂಧಿ ಅವರಿಗೆ ಧಿಕ್ಕಾರ ಹಾಕಿ ಜೈಲಿಗೆ ಹೋದವರು. ಜೈಲಿನಿಂದ ಹೊರ ಬಂದ ಸಂದರ್ಭದಲ್ಲೂ ಅವರಿಗೆ ರಾಷ್ಟ್ರದ ಬಗ್ಗೆ ಕಲ್ಪನೆ ಇರಲಿಲ್ಲ. ಸಮಾಜವಾದಿ ಪಾರ್ಟಿ, ಸ್ವಂತ ಪಕ್ಷ ಅಂತಾ ಇದ್ದರು. ಎಲ್ಲೆಲ್ಲಿ ಅಧಿಕಾರ ಸಿಗುತ್ತದೋ ಅಲ್ಲೆಲ್ಲಾ ಹರಿದಾಡಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರೀ ದಾವಣಗೆರೆ ಸಮಾವೇಶದಲ್ಲಿ ಜನ ಸೇರಿದ್ದಾರೆ ಎಂದ ಮಾತ್ರಕ್ಕೆ ಅಧಿಕಾರಕ್ಕೇ ಬಂದೆವು ಎಂದು ಕನಸು ಕಾಣುತ್ತಿದ್ದಾರೆ. ಅವರ ಈ ಕನಸಿಗೆ ಶಿವಮೊಗ್ಗ ನಗರದ ಈ ಬೈಕ್ ರ್ಯಾಲಿಯೇ ಉತ್ತರ ನೀಡುತ್ತದೆ. ಮುಂದಿನ ದಿನಗಳಲ್ಲಿ ಬರುವ ಸಂಸತ್, ವಿಧಾನಸಭೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದ್ದು, ಕಾಂಗ್ರೆಸ್ ಗೆ ಭ್ರಮನಿರಸನವಾಗಲಿದೆ. ಠೇವಣಿ ಕೂಡ ಸಿಗುವುದಿಲ್ಲ. ವಿರೋಧಪಕ್ಷದ ಸ್ಥಾನವನ್ನೂ ಕಳೆದುಕೊಳ್ಳುತ್ತಾರೆ ಎಂದರು.
ಬಿಜೆಪಿ, ಆರ್ ಎಸ್ ಎಸ್ ಕಚೇರಿ ಮೇಲೆ ಧ್ವಜ ಹಾರಿಸಲಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸ್ವಾತಂತ್ರೋತ್ಸವಕ್ಕೂ, ಸಿದ್ದರಾಮಯ್ಯ ಅವರಿಗೂ ಏನು ಸಂಬಂಧ ? ಸ್ವಾತಂತ್ರ್ಯ ತರುವುದಕ್ಕೆ ರಾಷ್ಟ್ರ ಭಕ್ತರು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಸಿದ್ದರಾಮಯ್ಯ ಆಗ ಹುಟ್ಟಿಯೇ ಇರಲಿಲ್ಲ ಎಂದು ಛೇಡಿಸಿದರು.
ಸರ್ಕಾರ ಧ್ವಜವನ್ನು ಉಚಿತವಾಗಿ ಕೊಡಬೇಕಿತ್ತು ಎಂದು ಡಿ.ಕೆ. ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿ, ಡಿ.ಕೆ. ಶಿವಕುಮಾರ್ ಮೊಸರಲ್ಲಿ ಕಲ್ಲು ಹುಡುಕುವ ವ್ಯಕ್ತಿ. ಇದರಲ್ಲಿ ಹುಡುಕುವುದರಲ್ಲಿ ತಪ್ಪಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ರಾಷ್ಟ್ರ ಧ್ವಜದ ವಿಚಾರದಲ್ಲೂ ಈ ರೀತಿ ರಾಜಕಾರಣ ಮಾಡಿದ್ರೆ ಅವರಿಗೆ ಎಷ್ಟರಮಟ್ಟಿಗೆ ರಾಷ್ಟ್ರ ಪ್ರೇಮ ಇದೆ ಅಂತಾ ಅರ್ಥ ಆಗ್ತದೆ. ಇಡಿ ದೇಶದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬದುಕಿದ್ದರೆ ಧ್ವಜ ಕೊಡಲಿ. ನಮ್ಮ ಅಭ್ಯಂತರ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ರಾಷ್ಟ್ರಪ್ರೇಮದಲ್ಲಿ ರಾಜಕಾರಣ ಮಾಡಬಾರದು. ವಿರೋಧ ಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕಬಾರದು ಎಂದು ಹೇಳಿದರು.
ಆರ್ ಎಸ್ ಎಸ್ ಸಂಸ್ಥಾಪಕರು ಸಹ ಕಾಂಗ್ರೆಸ್ ನಲ್ಲಿದ್ದರು. ಸಿದ್ದರಾಮಯ್ಯ ಸಿಕ್ಕ ಸಿಕ್ಕಾಗ ಕಾಂಗ್ರೆಸ್ ಗೆ ಬೈಯುತ್ತಿದ್ದರು. ಈಗ ಕಾಂಗ್ರೆಸ್ ಬಗ್ಗೆ, ರಾಷ್ಟ್ರ ಧ್ವಜದ ಬಗ್ಗೆ ಮಾತನಾಡ್ತಿದ್ದಾರೆ. ಇಂದಿರಾಗಾಂಧಿ ವಿರುದ್ದ ಮಾತನಾಡಿ ಜೈಲಿಗೆ ಹೋಗಿದ್ದು ಹೌದು ಅಂತಾ ಒಪ್ಪಿಕೊಳ್ಳಿ. ಆರ್ ಎಸ್ ಎಸ್ ವಿರುದ್ದ ಮಾತನಾಡುವ ನೈತಿಕತೆ ಸಿದ್ದರಾಮಯ್ಯ ಅವರಿಗಿಲ್ಲ. ರಾಷ್ಟ್ರ ಧ್ವಜ ಎಲ್ಲೆಲ್ಲಿ ಹಾರಿಸಬೇಕು ಅಂತಾ ನಮಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು.
ಎಲ್ಲೆಲ್ಲಿ ರಾಷ್ಟ್ರಧ್ವಜ ಹಾರಿಸಬೇಕು ಅಂತಾ ಅವರ ಕೇಳಿ ಹಾರಿಸಬೇಕಾ? ಅವರ ರೀತಿ ಅಧಿಕಾರಕ್ಕಾಗಿ ರಾಷ್ಟ್ರ ಧ್ವಜ ಬಳಸಲ್ಲ. ಸಿದ್ದರಾಮಯ್ಯ, ಡಿಕೆಶಿ ಅವರಿಂದ ರಾಷ್ಟ್ರ ಧ್ವಜದ ಬಗ್ಗೆ ಕಲಿಯುವ ಅವಶ್ಯಕತೆ ಇಲ್ಲ ಸ್ವಾತಂತ್ರ್ಯ ಹೋರಾಟಗಾರರ ಆತ್ಮಕ್ಕೆ ಶಾಂತಿ ಸಿಗಬೇಕು. ಆ ರೀತಿ ಆಚರಣೆ ಮಾಡ್ತೀವಿ. ಈ ಬಗ್ಗೆ ಪ್ರಶ್ನಿಸುವ ನೈತಿಕತೆ ಕಾಂಗ್ರೆಸ್ ನವರಿಗೆ ಇಲ್ಲ ಎಂದು ಹರಿಹಾಯ್ದಿದ್ದಾರೆ.
ಭ್ರಷ್ಟಾಚಾರದ ಬಗ್ಗೆ, ಪ್ರವಾಹದ ಬಗ್ಗೆ ಮಾತನಾಡುವ ಅಧಿಕಾರ ಡಿಕೆಶಿಗೆ ಇಲ್ಲ. ಏಕೆಂದರೆ ಸಾವಿರಾರು ಕೋಟಿ ಭ್ರಷ್ಟಾಚಾರ ಮಾಡಿ ತಿಹಾರ್ ಜೈಲಿಗೆ ಹೋಗಿ ಬಂದು ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಏನು ಅಧಿಕಾರ ಇದೆ. ಡಿಕೆಶಿಗೆ, ಸಿದ್ದರಾಮಯ್ಯ ಅವರಿಗೆ ಸರಕಾರದ ವಿರುದ್ದ ಟೀಕೆ ಮಾಡದಿದ್ದರೆ ತಿಂದ ಅನ್ನ ಕರಗುವುದಿಲ್ಲ. ಟೀಕೆ ಮಾಡುವುದೇ ಅವರ ಕೆಲಸ, ಒಳ್ಳೆಯ ಕೆಲಸದ ಬಗ್ಗೆ ಮಾತನಾಡಿಯೇ ಗೊತ್ತಿಲ್ಲ ಅವರಿಗೆ. ಕಾಂಗ್ರೆಸ್ ನವರು ಏನೇನು ಮಾಡಲು ಸಾಧ್ಯವೋ ಅದೆಲ್ಲಾ ಮಾಡ್ತಿದ್ದಾರೆ. ಆ ತಪ್ಪುಗಳನ್ನು ಬಿಜೆಪಿ ಮೇಲೆ ಹಾಕಲು ಹೊರಟ್ಟಿದ್ದಾರೆ. ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.