ಪ್ಲಾಸ್ಟಿಕ್ ಬಳಕೆ ನಿಷೇಧಿಸುವ ಹಲವು ಕ್ರಮಗಳ ಹೊರತಾಗಿಯೂ ಅದರ ಉತ್ಪಾದನೆ ಮತ್ತು ಬಳಕೆಗೆ ಸಂಪೂರ್ಣ ಕಡಿವಾಣ ಹಾಕಲಾಗಿಲ್ಲ. ಪರಿಸರಕ್ಕೆ ಹಾನಿಯಾಗುವ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮತ್ತು ಎಚ್ಚರಿಕೆ ನಡುವೆಯೂ ಪ್ಲಾಸ್ಟಿಕ್ ಬಳಕೆ ಎಗ್ಗಿಲ್ಲದೇ ನಡೆಯುತ್ತಿದೆ. ಇಂತಹ ಪ್ಲಾಸ್ಟಿಕ್ ಪರಿಸರ ಮತ್ತು ಪ್ರಾಣಿಗಳಿಗೆ ಹಾನಿಯನ್ನುಂಟು ಮಾಡುತ್ತವೆ. ಪ್ರವಾಸಿಗರು ಎಸೆಯುವ ವಿಷಕಾರಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಅಮಾಯಕ ಪ್ರಾಣಿಗಳು ಹೇಗೆ ಅಗಿಯಲು ಪ್ರಯತ್ನಿಸುತ್ತವೆ ಎಂಬುದನ್ನು ತೋರಿಸುವ ವಿಡಿಯೋವೊಂದನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಅವರು ಹಂಚಿಕೊಂಡಿದ್ದಾರೆ.
ಕ್ಲಿಪ್‌ನಲ್ಲಿ ಹುಲಿಯೊಂದು ಪ್ಲಾಸ್ಟಿಕ್ ಚೀಲವನ್ನು ನೋಡುತ್ತಾ ಅದರ ಹತ್ತಿರ ಬಂದು ಪರಿಶೀಲಿಸುವುದನ್ನು ಕಾಣಬಹುದು. ಹುಲಿ ಅದನ್ನು ಅಗಿಯಲು ಪ್ರಯತ್ನಿಸಬಹುದು ಅಥವಾ ಅಗಿಯುವ ಪ್ರಯತ್ನದ ವೇಳೆ ಪ್ಲಾಸ್ಟಿಕ್ ಉಸಿರುಗಟ್ಟಿಸಬಹುದು, ಅಥವಾ ಪ್ರಾಣಿ ತಿಂದು ಕೊನೆಗೆ ಸಾಯುವ ಸಾಧ್ಯತೆ ಹೆಚ್ಚು. ಹೀಗಾಗಿ ಪ್ಲಾಸ್ಟಿಕ್ ಚೀಲಗಳನ್ನ ಎಲ್ಲೆಂದರಲ್ಲಿ ಎಸೆಯದಂತೆ ಎಚ್ಚರಿಸಲು ಸುಶಾಂತ ನಂದಾ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ವೀಕ್ಷಿಸಿದ ನೆಟ್ಟಿಗರು ಅರಣ್ಯ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಎಸೆಯುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.