ಬೆಂಗಳೂರು: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಕಿಡಿಕಾರಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಚಿವ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ದೊಡ್ಡವರು, ಅವರ ಬಗ್ಗೆ ಮಾತನಾಡಲ್ಲ, ರಾಜ್ಯದಲ್ಲಿ ಎಲ್ಲವನ್ನೂ ಕುಮಾರಣ್ಣ, ಅಶೋಕಣ್ಣನೇ ಮಾಡಿದ್ದು, ಕಾಂಗ್ರೆಸ್ ಏನೂ ಮಾಡಿಲ್ಲ ಬಿಡಿ ಎಂದು ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಎಲ್ಲಾ ಹೆಚ್.ಡಿ.ಕೆಯೇ ಮಾಡಿದ್ದು. ಕಾಂಗ್ರೆಸ್ ಏನೂ ಮಾಡಿಲ್ಲ. ಎಲ್ಲಾ ಕುಮಾರಣ್ಣ, ಅಶೋಕಣ್ಣ, ಕಾರಜೋಳ ಮಾಡಿರುವುದು. ನಾವು ಯಾವುದೇ ಯೋಜನೆ ಜಾರಿ ತಂದಿಲ್ಲ, ಅಭಿವೃದ್ಧಿಯನ್ನೂ ಮಾಡಿಲ್ಲ ಬಿಡಿ ಎಂದರು.
ಮೇಕೆದಾಟಿಗಾಗಿ ನಮ್ಮ ಹೋರಾಟವನ್ನು ತಡೆಯಲು ಸಾಧ್ಯವಿಲ್ಲ. ನಾವು ಕಾನೂನು ಬಿಟ್ಟು ಏನೂ ಮಾಡುವುದಿಲ್ಲ, ಕೋವಿಡ್ ಮಾರ್ಗಸೂಚಿಯನ್ನೂ ಉಲ್ಲಂಘಿಸಲ್ಲ. ಎಲ್ಲವನ್ನು ಗಮನದಲ್ಲಿಟ್ಟುಕೊಂಡೇ ನಡೆಯುತ್ತೇವೆ. ನಮ್ಮ ಪಾದಯಾತ್ರೆ ತಡೆಯಲು ಇವರು ಯಾರು? ಅಗತ್ಯ ಬಿದ್ದರೆ ನಾನು ಸಿದ್ದರಾಮಯ್ಯ ಇಬ್ಬರೇ ನಡೆಯುತ್ತೇವೆ ಎಂದು ಗುಡುಗಿದರು.
ರಾಜ್ಯ ವಿರೋಧಿ ಕೆಲಸಕ್ಕಾಗಿ ನಾವು ಪಾದಯಾತ್ರೆ ಮಾಡುತ್ತಿಲ್ಲ. ರಾಜ್ಯದ ಜನತೆಗಾಗಿ, ಕುಡಿಯುವ ನೀರಿಗಾಗಿ ಹೋರಾಟ ನಡೆಸುತ್ತಿದ್ದೇವೆ. ಹೀಗಾಗಿ ಮುಖ್ಯಮಂತ್ರಿಗಳು ಪಾದಯಾತ್ರೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ರಾಮನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಪಾದಯಾತ್ರೆಗೆ ನಿರ್ಬಂಧ ವಿಧಿಸುವುದು ಸಿಎಂ ಗೆ ಶೋಭೆತರಲ್ಲ. ರಾಜ್ಯದಲ್ಲಿ ಕೊರೊನಾ ಪ್ರಕರಣ ಎಲ್ಲಿದೆ? ನಾನೂ ಕೂಡ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಯಾರೊಬ್ಬರೂ ಕೊರೊನಾದಿಂದ ಐಸಿಯುಗೆ ದಾಖಲಾಗಿಲ್ಲ. ಅನಗತ್ಯವಾಗಿ ಪಾದಯಾತ್ರೆಗೆ ತಡೆಯೊಡ್ಡುವ ಕ್ರಮ ಬೇಡ. ನಾವು ಜೈಲಿಗೆ ಹೋಗಲು ಸಿದ್ಧರಿದ್ದೇವೆ. ಮೇಕೆದಾಟು ಯೋಜನೆಗಾಗಿ ಪಕ್ಷಾತೀತವಾಗಿ ಪಾದಯಾತ್ರೆಗೆ ಕರೆ ಕೊಟ್ಟಿದ್ದೇವೆ ಎಂದು ಹೇಳಿದರು.