ಕಾಂಗ್ರೆಸ್ ಪಕ್ಷದ ಮೇಕೆದಾಟು ಯೋಜನೆ ಪಾದಯಾತ್ರೆಗೆ ಬಿಜೆಪಿ ಪಾಳಯ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕೊರೋನಾ ಉಲ್ಭಣಿಸುತ್ತಿರುವಾಗ ಕಾಂಗ್ರೆಸ್ ಪಾದಯಾತ್ರೆ ಎಂದು ಉದ್ಧಟತನ ಮೆರೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ಬಿಜೆಪಿ ನಾಯಕ ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದು, ಡಿ.ಕೆ.ಶಿ. ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ ರಾಜಕೀಯ ಪಕ್ಷಗಳಿಗಾಗಲಿ, ವ್ಯಕ್ತಿಗಳಿಗಾಗಲಿ ಒಂದು ಬದ್ಧತೆ ಇರಬೇಕು. ಮೇಕೆದಾಟು ಪಾದಯಾತ್ರೆ ಮಾಡೇ ಮಾಡ್ತೀವಿ ಅಂತ ಹೇಳ್ತಿದ್ದಾರೆ. ಆದರೆ ಅವರು ಅಧಿಕಾರದಲ್ಲಿದ್ದಾಗ ಯಾವ ಕಾರ್ಯ ಮಾಡದ ಅವರು, ಈಗ ಪಾದಯಾತ್ರೆ ಮಾಡಲು ಹೊರಟಿದ್ದಾರೆ. ಇದು ಜನರ ಒಳಿತಿಗಾಗಿ ನಡೆಯುತ್ತಿರುವ ಪಾದಯಾತ್ರೆ ಅಲ್ಲ, ಅವರವರ ಲಾಭಕ್ಕಾಗಿ ಮಾಡುತ್ತಿರುವ ರಾಜಕೀಯ ಎಂದಿದ್ದಾರೆ.
ಜೊತೆಗೆ ರಾಮನಗರದಲ್ಲಾದ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ರೇಣುಕಾಚಾರ್ಯರವರು, ಎಲ್ಲರಿಗೂ ಅವರದ್ದೇಯಾದ ತಾಕತ್ ಇದ್ದೆ ಇರುತ್ತದೆ. ಈಗ ತಾಕತ್ತಿನ ಬಗ್ಗೆ ಪ್ರಶ್ನೆ ಬೇಡ, ಅದನ್ನ ಇಲ್ಲಿ ಪ್ರದರ್ಶನ ಮಾಡೋದು ಬೇಡ. ಅವರ ತಾಕತ್ತನ್ನ, ಗಂಡಸ್ತನವನ್ನ ಕೆಲಸದಲ್ಲಿ ಮಾಡಿ ತೋರಿಸಲಿ ಎಂದು ಡಿಕೆ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.