ಏರುತ್ತಿರುವ ಪೆಟ್ರೋಲ್ – ಡೀಸೆಲ್ ಬೆಲೆಯಿಂದಾಗಿ ಬಹುತೇಕರು ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಮುಖ ಮಾಡುತ್ತಾರೆ. ಆದರೆ ಹೋದ ಕಡೆಗಳಲ್ಲಿ ಚಾರ್ಜ್ ಮಾಡುವುದು ಕಷ್ಟಕರ ಎಂಬ ಕಾರಣಕ್ಕೆ ಕೆಲವರು ಹಿಂದೇಟು ಹಾಕುತ್ತಾರೆ. ಅಂತವರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ.
ರಾಜ್ಯದಾದ್ಯಂತ 1000 ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಮೆಸ್ಕಾಂ ವ್ಯಾಪ್ತಿಯ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 248 ಚಾರ್ಜಿಂಗ್ ಪಾಯಿಂಟ್ ಗಳನ್ನು ಸ್ಥಾಪಿಸಲಾಗುತ್ತದೆ.
ಈಗಾಗಲೇ 20 ಚಾರ್ಜಿಂಗ್ ಸ್ಟೇಷನ್ ಗಳನ್ನು ಆರಂಭಿಸಲಾಗಿದ್ದು, 30 ಸ್ಟೇಷನ್ ಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ. ಇದರ ಮಧ್ಯೆ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸಬ್ಸಿಡಿ ಮತ್ತು ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ ಆರಂಭಿಸಲು ಸಹ ಸರ್ಕಾರ ಸಬ್ಸಿಡಿ ನೀಡುತ್ತಿದ್ದು, ಖಾಸಗಿಯವರು ಸಹ ಮುಂದೆ ಬರಬಹುದಾಗಿದೆ.
ಪ್ರವಾಸಿ ತಾಣಗಳು, ಹೆದ್ದಾರಿ, ಜಿಲ್ಲಾ ಕೇಂದ್ರಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಮೊದಲ ಹಂತದಲ್ಲಿ ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಲಾಗುತ್ತಿದ್ದು ಇವುಗಳು ಎಸಿ ಮತ್ತು ಡಿಸಿ ಚಾರ್ಜಿಂಗ್ ಸ್ಟೇಷನ್ ಗಳಾಗಿರಲಿವೆ. ಎಸಿ ಚಾರ್ಜಿಂಗ್ ಸ್ಟೇಷನ್ ಗಳಲ್ಲಿ ಸುಮಾರು ಮೂರು ಗಂಟೆ ಅವಧಿಯಲ್ಲಿ ವಾಹನ ಪೂರ್ಣ ಚಾರ್ಜ್ ಆಗಲಿದ್ದರೆ ಡಿಸಿಯಲ್ಲಿ ಕೇವಲ ಅರ್ಧ ಗಂಟೆಯಲ್ಲಿ ಚಾರ್ಜ್ ಆಗುತ್ತದೆ.