ಪೆಟ್ರೋಲ್ ಹಾಗೂ ಡಿಸೇಲ್ ದರ ಮುಗಿಲು ಮುಟ್ಟಿರುವ ಹಿನ್ನಲೆಯಲ್ಲಿ ಜನ ಸಾಮಾನ್ಯರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಸರ್ಕಾರಗಳೂ ಸಹ ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೆಲವೊಂದು ರಿಯಾಯಿತಿಗಳನ್ನು ನೀಡುತ್ತಿದೆ.
ಆದರೆ ಎಲೆಕ್ಟ್ರಿಕ್ ವಾಹನ ಹೊಂದಿದವರಿಗೆ ಚಾರ್ಜಿಂಗ್ ಮಾಡುವುದೇ ದೊಡ್ಡ ಸಮಸ್ಯೆ. ಅದರಲ್ಲೂ ದೂರದ ಪ್ರಯಾಣ ಸಂದರ್ಭದಲ್ಲಿ ಚಾರ್ಜ್ ಖಾಲಿಯಾದರೆ ಎಂಬ ಆತಂಕ ಕಾಡುತ್ತಿರುತ್ತದೆ. ಇದೀಗ ಅಂತವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ.
ರಾಜ್ಯದಲ್ಲಿ ಒಂದು ಸಾವಿರ ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಇವುಗಳಲ್ಲಿ ಮೂರೂವರೆ ಸಾವಿರ ಪ್ಲಗ್ ಪಾಯಿಂಟ್ ಆಳವಡಿಸಲಾಗುತ್ತದೆ ಎಂದು ಹೇಳಲಾಗಿದೆ.
ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಇಂಧನ ಸಚಿವ ವಿ. ಸುನೀಲ್ ಕುಮಾರ್ ಈ ವಿಷಯ ತಿಳಿಸಿದ್ದು, ರಾಜ್ಯದ ಪ್ರತಿ ಜಿಲ್ಲಾ ಕೇಂದ್ರ, ಪ್ರವಾಸಿ ತಾಣ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈ ಚಾರ್ಜಿಂಗ್ ಸ್ಟೇಷನ್ ಆರಂಭವಾಗಲಿದೆ ಎಂದಿದ್ದಾರೆ.