ಎಲೆಕ್ಟ್ರಿಕ್ ವಾಹನಗಳ ದರ್ಬಾರು ಎಲ್ಲಾ ಕಡೆ ನಿಧಾನವಾಗಿ ಶುರುವಾಗ್ತಾ ಇದೆ. ಎಲೆಕ್ಟ್ರಿಕ್ ಕಾರುಗಳಿಗಿಂತಲೂ ಹೆಚ್ಚಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಜನರು ನೆಚ್ಚಿಕೊಳ್ತಿದ್ದಾರೆ. ಆದರೆ ಇತ್ತೀಚಿಗೆ ಎಲೆಕ್ಟ್ರಿಕ್ ಕಾರು ಮತ್ತು ಸ್ಕೂಟರ್‌ಗಳಿಗೆ ಬೆಂಕಿ ಹೊತ್ತಿಕೊಂಡ ಪ್ರಕರಣಗಳು ಬಳಕೆದಾರರಲ್ಲಿ ಆತಂಕವನ್ನು ಹೆಚ್ಚಿಸಿವೆ.
ಇವಿ ತಯಾರಕರು ಈ ರೀತಿ ಅವಘಡ ಸಂಭವಿಸದಂತೆ ಬ್ಯಾಟರಿ ತಂತ್ರಜ್ಞಾನವನ್ನು ಸುಧಾರಿಸಲು ಶ್ರಮವಹಿಸ್ತಿದ್ದಾರೆ. ಆದ್ರೆ ಸಂಪೂರ್ಣ ಸುರಕ್ಷಿತವಾದ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬರುವವರೆಗೂ ಸವಾರರು ಕೆಲವೊಂದು ಸುರಕ್ಷತಾ ಮಾನದಂಡಗಳನ್ನು ಅನುಸರಿಸಬೇಕು.
ಎಲೆಕ್ಟ್ರಿಕ್ ವೆಹಿಕಲ್‌ಗಳ ಬ್ಯಾಟರಿ ಸ್ಫೋಟಗೊಳ್ಳದಂತೆ ನೋಡಿಕೊಳ್ಳುವುದು ಹೇಗೆ ?
ವಿಪರೀತ ತಾಪಮಾನದಿಂದ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬ್ಯಾಟರಿಯನ್ನು ರಕ್ಷಿಸಿ. ಇವಿಯನ್ನು ಹೊರಗೆ ಬಿರು ಬಿಸಿಲಿನಲ್ಲಿ ನಿಲ್ಲಿಸಬೇಡಿ.
ನಿರ್ದಿಷ್ಟ ಬ್ಯಾಟರಿ ಪ್ರಕಾರಗಳಿಗೆ ಕಂಪನಿ ನೀಡಿರುವ ಅಧಕೃತ ಚಾರ್ಜರ್ ಅನ್ನು ಮಾತ್ರ ಬಳಸಿ, ಸ್ಕೂಟರ್ ಓಡಿಸಿದ ಬಳಿಕ ಒಂದು ಗಂಟೆಯೊಳಗೆ ಬ್ಯಾಟರಿಯನ್ನು ಚಾರ್ಜ್ ಮಾಡಬೇಡಿ. ಸ್ವಲ್ಪ ಸಮಯ ಸ್ಕೂಟರ್‌ನ ಎಂಜಿನ್ ತಣ್ಣಗಾಗಲು ಬಿಡಿ.
ಬ್ಯಾಟರಿ ಕೇಸ್‌ನಲ್ಲಿ ಏನಾದ್ರೂ ಸಮಸ್ಯೆ ಇದೆಯಾ ಎಂಬುದನ್ನು ಆಗಾಗ ಪರಿಶೀಲಿಸಿ. ದೋಷ ಕಂಡುಬಂದಲ್ಲಿ ಕೂಡಲೇ ತಯಾರಕರಿಗೆ ತಿಳಿಸಿ. ವೇಗವಾಗಿ ಚಾರ್ಜ್ ಮಾಡಬೇಡಿ. ಹಾಗೆ ಮಾಡಿದರೆ ಬ್ಯಾಟರಿಯ ಸಾಮರ್ಥ್ಯ ತಗ್ಗುತ್ತದೆ. ಜೊತೆಗೆ ಬ್ಯಾಟರಿಗೆ ಬೆಂಕಿ ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಎಲೆಕ್ಟ್ರಿಕ್ ಕಾರು ಅಥವಾ ಸ್ಕೂಟರ್‌ಗೆ ಬೆಂಕಿ ಬಿದ್ದಾಗ ಕೂಡಲೇ ಅದನ್ನು ನಿಲ್ಲಿಸಿ, ತುರ್ತು ಸೇವೆಗಳಿಗೆ ಕರೆ ಮಾಡಿ, ನೀವೇ ಬೆಂಕಿ ನಂದಿಸಲು ಯತ್ನಿಸಬೇಡಿ.