ಕಳೆದ ಐಪಿಎಲ್ ಸೀಸನ್ ನಲ್ಲಿ ಆರೆಂಜ್ ಕ್ಯಾಪ್ ಗಳಿಸಿದ್ದ ಸಿ ಎಸ್ ಕೆ ತಂಡದ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್, ವಿಜಯ್ ಹಜಾರೆ ಟ್ರೋಫಿಯಲ್ಲಿ ಎರಡು ಶತಕ ಸಿಡಿಸಿ ಮಿಂಚಿದ್ದಾರೆ.
ಐಪಿಎಲ್ ನಂತೆ ಈ ಟೂರ್ನಿಯಲ್ಲಿಯೂ ಗಾಯಕ್ವಾಡ್ ಭರ್ಜರಿ ಫಾರ್ಮ್ ಕಂಡುಕೊಂಡಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿಯೂ ರುತುರಾಜ್ ಬ್ಯಾಟ್ ನಿಂದ ಸಾಕಷ್ಟು ರನ್ ಗಳು ಹರಿದು ಬಂದಿದ್ದವು. ಸದ್ಯ ಅದೇ ಫಾರ್ಮ್ ನಲ್ಲಿ ರುತುರಾಜ್ ಬ್ಯಾಟಿಂಗ್ ಮುಂದುವರೆಸಿದ್ದಾರೆ.
ಮಹಾರಾಷ್ಟ್ರ ತಂಡದ ನಾಯಕರಾಗಿರುವ ಗಾಯಕ್ವಾಡ್ ಸತತ ಎರಡು ಪಂದ್ಯಗಳನ್ನು ಎರಡು ಸೆಂಚುರಿಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.
ಡಿ. 9ರಂದು ಛತ್ತೀಸಗಢ ವಿರುದ್ಧ ನಡೆದ ಪಂದ್ಯದಲ್ಲಿ ಗಾಯಕ್ವಾಡ್ ಶತಕ ಬಾರಿಸಿದ್ದಾರೆ. 105 ಎಸೆತಗಳಲ್ಲಿ ಅವರು ಶತಕ ಬಾರಿಸಿದ್ದಾರೆ. ಡಿ. 8ರಂದು ನಡೆದಿದ್ದ ಮೊದಲ ಪಂದ್ಯದಲ್ಲಿ ಮಧ್ಯಪ್ರದೇಶದ ವಿರುದ್ಧ 136 ರನ್ ಗಳನ್ನು ಬಾರಿಸಿ ಮಿಂಚಿದ್ದರು.
2021ರ ಐಪಿಎಲ್ ನಲ್ಲಿ ಗಾಯಕ್ವಾಡ್ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿ 636 ರನ್ ಗಳಿಸಿ ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು. ಸದ್ಯ ಭರ್ಜರಿ ಫಾರ್ಮ್ ನಲ್ಲಿರುವ ಗಾಯಕ್ವಾಡ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಭಾಗವಹಿಸುವ ಕನಸು ಕಾಣುತ್ತಿದ್ದಾರೆ.