ಕೊರೊನಾ ಎರಡನೇ ಅಲೆಯಲ್ಲಿ ಉಂಟಾದ ಸಾವು – ನೋವುಗಳನ್ನು ನೋಡಿ ಸಾರ್ವಜನಿಕರು ಬೆಚ್ಚಿಬಿದ್ದಿದ್ದರು. ಆಕ್ಸಿಜನ್ ಇಲ್ಲದೆ ಕಾರಿನಲ್ಲಿ, ಮಾರ್ಗಮಧ್ಯದಲ್ಲೇ ಪ್ರಾಣಬಿಟ್ಟ ಹಲವರನ್ನು ದೃಶ್ಯ ಮಾಧ್ಯಮಗಳ ಮೂಲಕ ನೋಡಿ ಮಮ್ಮಲ ಮರುಗಿದ್ದರು. 2ನೇ ಅಲೆ ಜನತೆಗೆ ಪಾಠ ಕಲಿಸಿದಂತಿದೆ. ಹೀಗಾಗಿಯೇ ಕೊರೊನಾ ಮೂರನೇ ಅಲೆ ತಡೆಗಟ್ಟಲು ರಾಜ್ಯ ಸರ್ಕಾರ ಘೋಷಿಸಿದ್ದ ವಿಕೆಂಡ್ ಕರ್ಫ್ಯೂಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ.
ಶುಕ್ರವಾರದ ರಾತ್ರಿ 10 ಗಂಟೆಯಿಂದ ವೀಕೆಂಡ್ ಕರ್ಫ್ಯೂ ಆರಂಭವಾಗಿದ್ದು, ಶನಿವಾರ ಹಗಲಿನ ವೇಳೆಯೂ ಜನತೆ ಅನಗತ್ಯ ಓಡಾಟ ನಡೆಸದೆ ಮನೆಯಲ್ಲಿಯೇ ಇದ್ದಾರೆ. ಕೆಲವೊಂದು ಸಣ್ಣ-ಪುಟ್ಟ ಘಟನೆಗಳನ್ನು ಹೊರತುಪಡಿಸಿ ವೀಕೆಂಡ್ ಕರ್ಫ್ಯೂ ಬಹುತೇಕ ಯಶಸ್ವಿಯಾಗಿದೆ. ಇದರ ಮಧ್ಯೆಯೂ ಹೊರಬಂದ ಕೆಲವರಿಗೆ ಪೊಲೀಸರು ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ನಾಳೆ ಅಂದರೆ ಸೋಮವಾರ ಬೆಳಿಗ್ಗೆ ಐದು ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಮುಂದುವರೆಯಲಿದ್ದು, ಇಂದು ಸಹ ಇದರ ಯಶಸ್ಸಿಗೆ ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆಗೆ ಆಗ್ರಹಿಸಿ ಇಂದಿನಿಂದ ಪಾದಯಾತ್ರೆ ಕೈಗೊಳ್ಳಲು ಮುಂದಾಗಿದ್ದು, ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.