ಇತ್ತೀಚಿನ ದಿನಗಳಲ್ಲಿ ನಮಗೆ ಗೊತ್ತಿಲ್ಲದ ರಸ್ತೆಯಲ್ಲಿ ಪ್ರಯಾಣ ಮಾಡಬೇಕೆಂದ್ರೆ ಅಂಥದ್ದೇನೂ ಕಷ್ಟವಿಲ್ಲ. ಯಾಕಂದ್ರೆ ಈಗ ಡಿಜಿಟಲ್ ನಕ್ಷೆಗಳು ಮತ್ತು ಜಿಪಿಎಸ್ ಸಾಧನಗಳನ್ನು ಬಳಸಿ ಅಜ್ಞಾತ ಪ್ರದೇಶಗಳಲ್ಲಿ ಸಂಚಾರ ಮಾಡಬಹುದಾಗಿದೆ. ಇದರಿಂದ ನಮ್ಮ ಸ್ಥಳವನ್ನು ತಲುಪಲು ಕೂಡ ಸುಲಭವಾಗುತ್ತದೆ.
ಆದರೆ, ಕೆಲವೊಮ್ಮೆ ಇಂತಹ ತಂತ್ರಜ್ಞಾನಗಳು ಎಲ್ಲಾ ಸಂದರ್ಭಗಳಲ್ಲೂ ನಮಗೆ ಉಪಯುಕ್ತವಾಗಿರುವುದಿಲ್ಲ. ಕೆಲವೊಂದು ಬಾರಿ ಯಾವ್ಯಾವುದೋ ರಸ್ತೆಯಲ್ಲಿ ನಮ್ಮನ್ನು ಕರೆದುಕೊಂಡು ಹೋಗಿ ಇಕ್ಕಟ್ಟಿಗೆ ಸಿಲುಕಿಸುತ್ತದೆ. ಇದೇ ಪರಿಸ್ಥಿತಿ ಇಲ್ಲೊಬ್ಬ ಚಾಲಕನಿಗೆ ಎದುರಾಗಿದ್ದು, ಆತನಿಗೆ ಬದುಕಿದೆಯಾ ಬಡ ಜೀವವೇ ಎಂಬಂತಾದ ಘಟನೆ ನಡೆದಿದೆ.
ಚೀನಾದಲ್ಲಿ ಲಾರಿ ಚಾಲಕನೊಬ್ಬ ಜಿಪಿಎಸ್ ಸಾಧನವನ್ನು ಉಪಯೋಗಿಸಿ ಸಂಚಾರ ಮಾಡಿದ್ದಾನೆ. ಈ ವೇಳೆ ಆತನಿಗೆ ಕಿರಿದಾದ ರಸ್ತೆಯ, ಬಂಡೆಯ ನಡುವೆ ಸಾಗುವ ದಾರಿಯನ್ನು ತೋರಿಸಿದೆ. ಅದರ ಪ್ರಕಾರ ವಾಹನ ಚಲಾಯಿಸಿದ ಆತನಿಗೆ ಜೀವ ಬಾಯಿಗೆ ಬಂದಂತೆ ಆಗಿದೆ. ಈತ ಭಾರಿ ವಾಹನ ಚಲಾಯಿಸುತ್ತಿದ್ದು, ರಸ್ತೆ ಮಾತ್ರ ಬಹಳ ಕಿರಿದಾಗಿದೆ. ತಿರುವು-ಮುರುವು ರಸ್ತೆಯಲ್ಲಿ ಪ್ರಯಾಣಿಸುತ್ತಿರಬೇಕಿದ್ರೆ, ಅಚಾನಕ್ ಆಗಿ ವಾಹನವು 350 ಅಡಿ ಎತ್ತರದ ಬಂಡೆಯಿಂದ ಕೆಳಗೆ ಜಾರಿದೆ.
ಅದೃಷ್ಟವಶಾತ್ ವಾಹವನು ಅಲ್ಲಿಗೆ ನಿಂತುಕೊಂಡಿದ್ದು, ಸಿಕ್ಕಿಹಾಕಿಕೊಂಡಿದೆ. ಕೂಡಲೇ ಸ್ಥಳಕ್ಕಾಗಮಿಸಿದ ರಕ್ಷಣಾ ತಂಡ ಲಾರಿಯನ್ನು ಎಳೆದಿದೆ. ಟೋಯಿಂಗ್ ಟ್ರಕ್‌ಗಳಿಗೆ ಜೋಡಿಸುವ ಮೂಲಕ ಟ್ರಕ್ ಅನ್ನು ಅಪಾಯದಿಂದ ಹೊರತೆಗೆಯಲಾಗಿದೆ. ಮೂರು ದಿನಗಳ ಕಾಲ ನಡೆಸಿದ ರಕ್ಷಣಾ ಕಾರ್ಯಾಚರಣೆ ಅಂತಿಮವಾಗಿ ಯಶಸ್ಸು ಪಡೆದಿದೆ
ಸದ್ಯ, ಆನ್‌ಲೈನ್‌ನಲ್ಲಿ ಈ ಆಘಾತಕಾರಿ ವಿಡಿಯೋ ಹಂಚಿಕೊಳ್ಳಲಾಗಿದ್ದು ಭಾರಿ ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ದಿಗ್ಭ್ರಮೆಗೊಂಡಿದ್ದಾರೆ.