alex Certify ಎದೆನೋವು ಬಂದಾಗ ʼಆಸಿಡಿಟಿʼ ಎಂದು ಬೇಡ ನಿರ್ಲಕ್ಷ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎದೆನೋವು ಬಂದಾಗ ʼಆಸಿಡಿಟಿʼ ಎಂದು ಬೇಡ ನಿರ್ಲಕ್ಷ್ಯ

ಎಷ್ಟೋ ಬಾರಿ ಇದ್ದಕ್ಕಿದ್ದಂತೆ ನಮಗೆ ಎದೆನೋವು ಶುರುವಾಗಿಬಿಡುತ್ತದೆ. ಇದು ಆಸಿಡಿಟಿಯಿಂದ ಕಾಣಿಸಿಕೊಂಡಿರೋ ನೋವು ಎಂಬ ಭಾವನೆ ಎಲ್ಲರಲ್ಲೂ ಇರುತ್ತದೆ. ಆದ್ರೆ ಅಸಲಿಗೆ ಇದು ಆಸಿಡಿಟಿಯಿಂದ ಆಗಿದ್ದಲ್ಲ, ಇದನ್ನು ಆಂಜಿನಾ ಎಂದು ಕರೆಯಲಾಗುತ್ತದೆ.

ಹೃದಯಕ್ಕೆ ಸರಿಯಾಗಿ ರಕ್ತದ ಹರಿವು ಸಿಗದೇ ಹೋದಾಗ ಹೃದಯಾಘಾತ ಸಂಭವಿಸುತ್ತದೆ. ಈ ಆಂಜಿನಾ ಎಂಬುದು ಕೂಡ ಇಂಥದ್ದೇ ಕಾಯಿಲೆಯ ಲಕ್ಷಣವಾಗಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದೇ ಇದ್ರೆ ಪ್ರಾಣಕ್ಕೂ ಅಪಾಯವಾಗಬಹುದು.

ಆಂಜಿನಾ ಒಂದೇ ಬಾರಿ ಬರುತ್ತದೆ ಎಂಬ ನಿಯಮವಿಲ್ಲ, ಚಿಕಿತ್ಸೆಯ ನಂತರವೂ ಮರುಕಳಿಸುವ ಸಾಧ್ಯತೆ ಇರುತ್ತದೆ. ಆಂಜಿನಾ ನೋವು ಸಾಮಾನ್ಯವಾಗಿ ಬೇಗನೆ ಮಾಯವಾಗುತ್ತದೆ. ಔಷಧಿ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಗಳು ಈ ಸ್ಥಿತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ ಎಂಬುದು ತಜ್ಞರ ಸಲಹೆ.

ಆಂಜಿನಾವನ್ನು ಗುರುತಿಸುವುದು ಹೇಗೆ ?

ಅಜೀರ್ಣ ಅಥವಾ ಗ್ಯಾಸ್ಟ್ರಿಕ್‌ನಿಂದ ಉಂಟಾಗುವ ಎದೆ ನೋವಿಗೂ ಆಂಜಿನಾಗೂ ಇರುವ ವ್ಯತ್ಯಾಸವನ್ನು ಕಂಡುಹಿಡಿಯುವುದು ಕಷ್ಟ. ಆದಾಗ್ಯೂ  ಆಂಜಿನಾಗೆ ವಿಶಿಷ್ಟವಾದ ಕೆಲವು ರೋಗಲಕ್ಷಣಗಳಿವೆ, ಇದು ಈ ನೋವನ್ನು ತಕ್ಷಣವೇ ಗುರುತಿಸಲು ಸಹಾಯ ಮಾಡುತ್ತದೆ.

ಆಂಜಿನ ಸಾಮಾನ್ಯ ಲಕ್ಷಣಗಳು….

ಸುಡುವ ಸಂವೇದನೆ, ಹೊಟ್ಟೆ ತುಂಬಿದಂತಾಗುವುದು, ಹೃದಯದಲ್ಲಿ ಒತ್ತಡ, ಹೃದಯದ ಮೇಲೆ ಹಿಸುಕಿದಂತಾಗುವುದು, ಆಂಜಿನಾಗೆ ಸಂಬಂಧಿಸಿದ ಎದೆ ನೋವು ಇರಿತದಂತೆ ಭಾಸವಾಗುತ್ತದೆ. ಈ ರೀತಿಯ ಎದೆ ನೋವು ಇತರ ಸಂದರ್ಭಗಳಲ್ಲಿ ಕಂಡುಬರುವುದಿಲ್ಲ. ಆಂಜಿನಾದ ಮತ್ತೊಂದು ವಿಶಿಷ್ಟ ಲಕ್ಷಣವೆಂದರೆ ತೋಳುಗಳು, ಕುತ್ತಿಗೆ, ಭುಜ ಮತ್ತು ದವಡೆಯಂತಹ ದೇಹದ ಇತರ ಭಾಗಗಳಲ್ಲೂ ನೋವುಂಟಾಗುತ್ತದೆ. ಈ ಎಲ್ಲಾ ರೋಗಲಕ್ಷಣಗಳ ಜೊತೆಗೆ ತಲೆತಿರುಗುವಿಕೆ, ಆಯಾಸ, ಉಸಿರಾಟದ ತೊಂದರೆಗಳೂ ಕಾಣಿಸಿಕೊಳ್ಳುತ್ತವೆ. ಮೈ ವಿಪರೀತವಾಗಿ ಬೆವರುತ್ತದೆ. ಅಜೀರ್ಣದಿಂದ ಉಂಟಾಗುವ ಎದೆನೋವಿನಲ್ಲಿ ಈ ಲಕ್ಷಣಗಳು ಕಂಡುಬರುವುದಿಲ್ಲ.

ಆಂಜಿನಾದ ಇತರ ಲಕ್ಷಣಗಳು…..

ಹೃದಯಾಘಾತವನ್ನು ಗುರುತಿಸಲು ಸಹಾಯ ಮಾಡುವ ಆಂಜಿನಾದ ಹಲವಾರು ಇತರ ಚಿಹ್ನೆಗಳು ಕಂಡು ಬಂದರೆ ವೈದ್ಯರನ್ನು ಭೇಟಿ ಮಾಡಬೇಕು.

ವಾಂತಿಯಾಗುವುದು

ಹೊಟ್ಟೆ ಉರಿ

ಎದೆಯ ಹಿಂದೆ ನೋವು

ಹಿಂಭಾಗದಲ್ಲಿ ನೋವು

ಗಂಟಲಿನಲ್ಲಿ ಹಠಾತ್ ನೋವು

ಆಂಜಿನ ವಿಧಗಳು….

ಸ್ಥಿರ ಆಂಜಿನಾ: ಇದು ಅತ್ಯಂತ ಸಾಮಾನ್ಯವಾದ ಆಂಜಿನಾವಾಗಿದ್ದು, ಹೆಚ್ಚಾಗಿ ಒತ್ತಡ ಅಥವಾ ಯಾವುದೇ ದೈಹಿಕ ಚಟುವಟಿಕೆ ಮಿತಿಮೀರಿದರೆ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಸ್ವಲ್ಪ ಸಮಯದ ವಿಶ್ರಾಂತಿಯ ನಂತರ ಸರಿಹೋಗುತ್ತದೆ.

ಅಸ್ಥಿರ ಆಂಜಿನಾ: ಇದು ಸ್ಥಿರ ಆಂಜಿನಕ್ಕಿಂತ ಹೆಚ್ಚು ಗಂಭೀರವಾಗಿದೆ. ವ್ಯಕ್ತಿಯು ಸಕ್ರಿಯವಾಗಿಲ್ಲದಿದ್ದರೂ ಸಹ ಇದು ಸಂಭವಿಸುತ್ತದೆ. ಇದು ಮುಂಬರುವ ಹೃದಯಾಘಾತದ ಸಂಕೇತ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ವೇರಿಯಂಟ್ ಆಂಜಿನಾ: ಪ್ರಿಂಜ್‌ಮೆಟಲ್ ಆಂಜಿನಾ ಎಂದೂ ಇದನ್ನು ಕರೆಯುತ್ತಾರೆ. ಇದು ಹೃದಯದ ಅಪಧಮನಿಗಳಲ್ಲಿನ ಸೆಳೆತದಿಂದ ಉಂಟಾಗುತ್ತದೆ. ಏಕೆಂದರೆ ರಕ್ತದ ಹರಿವು ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ. ವಿಶ್ರಾಂತಿಯಲ್ಲಿದ್ದಾಗ ಅಥವಾ ರಾತ್ರಿಯ ಸಮಯದಲ್ಲಿ ಇದು ಮರುಕಳಿಸುತ್ತದೆ.

ರಿಫ್ರ್ಯಾಕ್ಟರಿ ಆಂಜಿನಾ: ಇದು ವಿವಿಧ ಔಷಧಿಗಳ ಮತ್ತು ಅನಾರೋಗ್ಯಕರ ಜೀವನಶೈಲಿಯ ಅಡ್ಡ ಪರಿಣಾಮವಾಗಿ ಸಂಭವಿಸುತ್ತದೆ.

ಮೈಕ್ರೊವಾಸ್ಕುಲರ್ ಆಂಜಿನಾ: ಇದು ಸಾಮಾನ್ಯವಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ.

ಆಂಜಿನಾ ನೋವು ಎಷ್ಟು ಕಾಲ ಇರುತ್ತದೆ ?

ಆಂಜಿನಾ ಸಾಮಾನ್ಯವಾಗಿ 3-5 ನಿಮಿಷಗಳವರೆಗೆ ಇರುತ್ತದೆ. ಕೆಲವೊಮ್ಮೆ ನೋವು 15 ನಿಮಿಷಗಳವರೆಗೂ ಇರಬಹುದು. ನೋವು ಮಾಯವಾಗಿ ಮತ್ತೆ ಬರಬಹುದು.

ಆಂಜಿನಾ ಯಾವಾಗ ಜೀವಕ್ಕೆ ಅಪಾಯಕಾರಿ ?

ಆಂಜಿನಾ ಎಂದಾಕ್ಷಣ ಹೃದಯಾಘಾತವಾಗಿಬಿಡುತ್ತದೆ ಎಂದರ್ಥವಲ್ಲ. ಆದರೆ ಖಂಡಿತವಾಗಿಯೂ ನಿಮ್ಮ ಹೃದಯ ಅಪಾಯದಲ್ಲಿದೆ ಎಂದರ್ಥ. ಸಾಕಷ್ಟು ಸಮಯದವರೆಗೆ ಹೃದಯವು ರಕ್ತದಿಂದ ವಂಚಿತವಾದಾಗ, ಆಂಜಿನಾವು ಜೀವವನ್ನು ತೆಗೆದುಕೊಳ್ಳುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...