ಬೆಂಗಳೂರು: ಕೊರೊನಾ ಸೋಂಕು, ಒಮಿಕ್ರಾನ್ ಪ್ರಕರಣಗಳ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದು, ಇಂದಿನಿಂದ 2 ವಾರಗಳ ಕಾಲ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಆರಂಭವಾಗಲಿದೆ.
ಈ ಹಿನ್ನೆಲೆಯಲ್ಲಿ ಮದ್ಯ ಪ್ರಿಯರಿಗೆ, ಪಾರ್ಟಿ ಮೂಡ್ ನಲ್ಲಿರುವವರಿಗೆ ವೀಕೆಂಡ್ ಕರ್ಫ್ಯೂ ಶಾಕ್ ನೀಡಿದೆ.
ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆ ವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದ್ದು, ಮದ್ಯದಂಗಡಿಗಳು ರಾತ್ರಿ 8 ಗಂಟೆಗೆ ಬಾಗಿಲು ಮುಚ್ಚಲಿವೆ. ಅಗತ್ಯ ವಸ್ತುಗಳ ಖರೀದಿ ಹೊರತುಪಡಿಸಿ ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್ ಸೇರಿದಂತೆ ಯಾವುದೇ ಸೇವೆಗೂ ವೀಕೆಂಡ್ ಕರ್ಫ್ಯೂ ನಲ್ಲಿ ಅವಕಾಶವಿಲ್ಲ ಎಂದು ಸರ್ಕಾರ ತಿಳಿಸಿದೆ.
ಈ ಕುರಿತು ಅಬಕಾರಿ ಸಚಿವ ಗೋಪಾಲಯ್ಯ ಸ್ಪಷ್ಟಪಡಿಸಿದ್ದು, ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಇಂದು ರಾತ್ರಿ 8 ಗಂಟೆಗೆ ರಾಜ್ಯಾದ್ಯಂತ ಮದ್ಯದಂಗಡಿಗಳನ್ನು ಬಂದ್ ಮಾಡಬೇಕು. ಪಾರ್ಸೆಲ್ ಗೂ ಅವಕಾಶವಿಲ್ಲ, ಕದ್ದುಮುಚ್ಚಿ ಮದ್ಯಮಾರಾಟ ಮಾಡಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬಾರ್ ಆಂಡ್ ರೆಸ್ಟೋರೆಂಟ್, ಮದ್ಯದಂಗಡಿಗಳು ಇಂದು ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗೂ ಬಂದ್ ಆಗಲಿವೆ. ಎರಡು ವಾರ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.