ಎಣ್ಣೆ ತ್ವಚೆ ಹೊಂದಿರುವವರು ಮೇಕಪ್ ಮಾಡುವುದಕ್ಕೆ ಆಗುತ್ತಿಲ್ಲ ಎಂದು ದೂರುತ್ತಿರುವುದನ್ನು ನೀವು ಕೇಳಿರಬಹುದು. ಎಣ್ಣೆಯಂಶ ಹೆಚ್ಚಾಗಿ ಒಸರಲ್ಪಡುವುದರಿಂದ ತ್ವಚೆಯ ಆರೈಕೆಗೆ ಹೆಚ್ಚಿನ ಕಾಳಜಿ ಬೇಕಾಗುತ್ತದೆ.
ಒಂದಷ್ಟು ಬಗೆಯ ಫೇಸ್ ಪ್ಯಾಕ್ ಗಳ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬಹುದು. ಕಡ್ಲೆ ಹಿಟ್ಟು ಹಾಗೂ ಮೊಸರನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಬೆರೆಸಿ. ಈ ಲೇಪನವನ್ನು ಮುಖಕ್ಕೆ ದಪ್ಪವಾಗಿ ಹಚ್ಚಿ ಬೆರಳುಗಳ ಮೂಲಕ ಮಸಾಜ್ ಮಾಡಿ. ಬಳಿಕ ತಣ್ಣೀರಿನಿಂದ ತೊಳೆದು ಒಣಗಿಸಿ.
ಮುಲ್ತಾನಿ ಮಿಟ್ಟಿಗೆ ಲಿಂಬೆರಸ, ಗುಲಾಬಿ ನೀರು ಬೆರೆಸಿ ನಯವಾದ ಲೇಪ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ ಒಣಗಿದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಪುದೀನಾ ಎಲೆಗೆ ನೀರು ಬೆರೆಸದೆ ರುಬ್ಬಿ. ಅದಕ್ಕೆ ಜೇನು ಬೆರೆಸಿ. ತಣ್ಣೀರಿನಿಂದ ಸ್ವಚ್ಛವಾಗಿ ತೊಳೆದುಕೊಂಡ ಬಳಿಕ ಮುಖಕ್ಕೆ ಹಚ್ಚಿ. ಬಳಿಕ ದಪ್ಪ ಟವೆಲಿನಿಂದ ಒರೆಸಿ.
ಲಿಂಬೆರಸ ಮತ್ತು ಜೇನಿನ ಫೇಸ್ ಪ್ಯಾಕ್ ತಯಾರಿಸಲು ಲಿಂಬೆ ರಸಕ್ಕೆ ಗುಲಾಬಿ ನೀರು ಮತ್ತು ಜೇನು ಬೆರೆಸಿ. ಮುಖಕ್ಕೆ ಹಚ್ಚಿ ಹದಿನೈದು ನಿಮಿಷಗಳ ಬಳಿಕ ತೊಳೆದರೆ ತ್ವಚೆಯಲ್ಲಿ ಜಿನುಗುವ ಜಿಡ್ಡಿನಂಶ ಕಡಿಮೆಯಾಗುತ್ತದೆ.