ಒಂದು ಚಟಕ್ಕೆ ಬಿದ್ದರೆ ಅದನ್ನು ಪೂರೈಸಿಕೊಳ್ಳಲು ಮನುಷ್ಯ ಏನು ಬೇಕಾದರೂ ಮಾಡುತ್ತಾನೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ.
27 ವರ್ಷದ ಯುವಕ ಶಿವಕುಮಾರ್ ಎಂಬಾತ ಮದ್ಯವ್ಯಸನಿ. ಮದ್ಯವಿಲ್ಲದಿದ್ದರೆ ಜೀವನವೇ ಇಲ್ಲ ಎಂಬಂತೆ ಎಂದು ಭಾವಿಸಿದ್ದ. ದಿನಂಪ್ರತಿ ಮದ್ಯ ಸೇವನೆಗೆ ಹಣದ ಅಗತ್ಯವಿತ್ತು. ಆದರೆ, ಆ ಹಣ ಹೊಂದಿಸುವುದು ಹೇಗೆ ಎಂದು ಯೋಚಿಸುತ್ತಿದ್ದ ಶ್ರೀರಂಗಪಟ್ಟಣದ ಈ ಮದ್ಯವ್ಯಸನಿಗೆ ನೆನಪಾದದ್ದು ದೇವಸ್ಥಾನಗಳು ಮತ್ತು ಪಾರ್ಕಿಂಗ್ ಸ್ಥಳಗಳ ಮುಂದೆ ನಿಲ್ಲುತ್ತಿದ್ದ ದ್ವಿಚಕ್ರ ವಾಹನಗಳು.
ಈ ಖತರ್ನಾಕ್ ಐಡಿಯಾದೊಂದಿಗೆ ದೇವಸ್ಥಾನಗಳು ಮತ್ತು ಪಾರ್ಕಿಂಗ್ ಸ್ಥಳಗಳಿಂದ 14 ವಾಹನಗಳನ್ನು ಕದ್ದೇ ಬಿಟ್ಟ. ಹೀಗೆ ಕದ್ದ ವಾಹನಗಳನ್ನು ಬಂದ ಬೆಲೆಗೆ ಮಾರಾಟ ಮಾಡಿ, ಅದರಿಂದ ಬರುತ್ತಿದ್ದ ಹಣದಲ್ಲಿ ಬೆಂಗಳೂರಿನ ಐಶಾರಾಮಿ ರಸ್ತೆಗಳಾಗಿರುವ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳ ಪಬ್ ಗಳಿಗೆ ಹೋಗಿ ಮದ್ಯಪಾನ ಮಾಡುತ್ತಿದ್ದ.
ಶಿವಕುಮಾರ್ ಮೂಲತಃ ಜೆಸಿಬಿ ಚಾಲಕನಾಗಿದ್ದು, ಬರುವ ಸಂಬಳ ಕುಡಿಯಲು ಸಾಕಾಗುತ್ತಿರಲಿಲ್ಲ. ಈತನ ಸ್ನೇಹಿತರು ವಾಹನ ಕಳ್ಳರಾಗಿದ್ದು, ಅವರಿಂದ ಕಳ್ಳತನದ ಪಾಠ ಹೇಳಿಸಿಕೊಂಡು ವಾಹನಗಳನ್ನು ಕದಿಯುತ್ತಿದ್ದ. ಕದ್ದ ವಾಹನಗಳನ್ನು ಮಂಡ್ಯದಲ್ಲಿ ಕೇವಲ 8 ರಿಂದ 10 ಸಾವಿರ ರೂಪಾಯಿಗೆ ಮಾರಾಟ ಮಾಡಿ ಅದನ್ನು ಪಬ್ ಗಳಲ್ಲಿ ಕುಡಿದು ಉಡಾಯಿಸುತ್ತಿದ್ದ.
ವಾಹನಗಳ ದಾಖಲೆಗಳನ್ನು ಕೇಳಿದ ಖರೀದಿದಾರರಿಗೆ ಇನ್ನೇನು ಒಂದೆರಡು ದಿನಗಳಲ್ಲಿ ನೀಡುತ್ತೇನೆ ಎಂದು ಯಾಮಾರಿಸುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.