ದಾಖಲೆ ಪತ್ರಗಳ ಪರಿಶೀಲನೆ ನೆಪದಲ್ಲಿ ವಾಹನಗಳನ್ನು ಸುಖಾ ಸುಮ್ಮನೆ ತಡೆಯುವಂತಿಲ್ಲ. ಕಣ್ಣಿಗೆ ಕಾಣುವಂತಹ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಸಂದರ್ಭದಲ್ಲಿ ಮಾತ್ರ ಈ ಕಾರ್ಯ ಮಾಡಬಹುದಾಗಿದೆ ಎಂದು ಎಡಿಜಿಪಿ ಪ್ರವೀಣ್ ಸೂದ್ ಲಿಖಿತ ಆದೇಶ ಹೊರಡಿಸಿದ್ದಾರೆ.
ಇದರ ಹೊರತಾಗಿಯೂ ಹಲವೆಡೆ ಟ್ರಾಫಿಕ್ ಪೊಲೀಸರು ವಾಹನಗಳನ್ನು ತಡೆದು ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದ್ದವು. ಇಂಥವುದೇ ಒಂದು ಪ್ರಕರಣದಲ್ಲಿ ಇದೀಗ ಟ್ರಾಫಿಕ್ ಕಾನ್ಸ್ಟೇಬಲ್ ಒಬ್ಬರು ಅಮಾನತುಗೊಂಡಿದ್ದಾರೆ.
ಎಚ್ಎಸ್ಆರ್ ಟ್ರಾಫಿಕ್ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಬೆಳ್ಳಂದೂರು ಎಕೋ ಸ್ಪೇಸ್ ಬಳಿ ಸುಖಾಸುಮ್ಮನೆ ವಾಹನ ತಡೆಯುತ್ತಿದ್ದಾರೆ ಎಂದು ಸಾರ್ವಜನಿಕರು ಟ್ವೀಟ್ ಮೂಲಕ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದರು.
ಇದಕ್ಕೆ ಕೂಡಲೇ ಸ್ಪಂದಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಈ ವೇಳೆ ಸಾರ್ವಜನಿಕರ ಆರೋಪ ನಿಜವೆಂದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಕಾನ್ಸ್ಟೇಬಲ್ ಅವರನ್ನು ಈಗ ಅಮಾನತುಗೊಳಿಸಲಾಗಿದೆ.