
ಎಟಿಎಂ ವಹಿವಾಟುಗಳಲ್ಲಿ ವಂಚನೆ ತಪ್ಪಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೊಸ ನಿಯಮವನ್ನು ಜಾರಿಗೆ ತಂದಿದೆ. ಹಾಗಾಗಿ ಇನ್ನು ಮುಂದೆ ಎಸ್.ಬಿ.ಐ. ಗ್ರಾಹಕರು ವಹಿವಾಟನ್ನು ಪೂರ್ಣಗೊಳಿಸಲು ಎಟಿಎಂಗಳಲ್ಲಿ ಹಣವನ್ನು ಪಡೆಯುವ ಮುನ್ನ ಓಟಿಪಿಯನ್ನು ನಮೂದಿಸಬೇಕಾಗುತ್ತದೆ.
ಆದರೆ ಎಸ್.ಬಿ.ಐ. ಎಟಿಎಂಗಳಲ್ಲಿ ಒಮ್ಮೆಲೇ 10,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ವಿತ್ಡ್ರಾ ಮಾಡುವವರಿಗೆ ಮಾತ್ರ ಈ ನಿಯಮ ಅನ್ವಯಿಸುತ್ತದೆ. ಈ ಸೌಲಭ್ಯವು ಎಲ್ಲಾ SBI ATM ಗಳಲ್ಲಿ ಜನವರಿ 1, 2020 ರಿಂದಲೇ ಅನ್ವಯಿಸುತ್ತದೆ ಎಂದು SBI ಡಿಸೆಂಬರ್ 26, 2019 ರಂದು ಟ್ವಿಟ್ಟರ್ನಲ್ಲಿ ಘೋಷಿಸಿತ್ತು.
ಎಟಿಎಂಗಳಲ್ಲಿ ಅನಧಿಕೃತ ವಹಿವಾಟಿನಿಂದ ಗ್ರಾಹಕರನ್ನು ರಕ್ಷಿಸಲು ಸಹಾಯ ಮಾಡಲೆಂದೇ OTP ಆಧಾರಿತ ನಗದು ವಿತ್ಡ್ರಾ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ ಎಂದು ಟ್ವೀಟ್ ಮಾಡಿತ್ತು. ಎಸ್.ಬಿ.ಐ. ಸಾಮಾಜಿಕ ಮಾಧ್ಯಮ ಮತ್ತು ಇತರ ವೇದಿಕೆಗಳ ಮೂಲಕ ಕಾಲಕಾಲಕ್ಕೆ ಎಟಿಎಂ ವಂಚನೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ. OTP, ಸಿಸ್ಟಂ ರಚಿತ ನಾಲ್ಕು ಅಂಕಿಯ ಸಂಖ್ಯೆಯಾಗಿದ್ದು, ಇದು ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುತ್ತದೆ. ಇದು ಕೇವಲ ಒಂದು ವಹಿವಾಟಿಗೆ ಮಾತ್ರ ಮಾನ್ಯವಾಗಿರುತ್ತದೆ.