
ಆಗಾಗ ನಾವು ಹೋಟೆಲ್, ಬೇಕರಿ ಹಾಗೂ ಬೀದಿ ಬದಿಯ ತಿಂಡಿ ತಿನಿಸುಗಳನ್ನು ತಿನ್ನುತ್ತಲೇ ಇರುತ್ತವೆ. ಇವುಗಳಿಂದ ಹೊಟ್ಟೆ ಕೆಟ್ಟು ಹೋಗುವುದು ಸಾಮಾನ್ಯ. ಹೊಟ್ಟೆಯಲ್ಲಿ ಸೋಂಕು ಉಂಟಾಗುತ್ತದೆ. ಪರಿಣಾಮ ಅತಿಸಾರ, ವಾಂತಿ ಮತ್ತು ಹೊಟ್ಟೆನೋವು ಕಾಡಲಾರಂಭಿಸುತ್ತದೆ.
ಈ ರೀತಿಯ ತೊಂದರೆಗಳಿದ್ದಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಬಹಳ ದಿನಗಳಿಂದ ಹೊಟ್ಟೆನೋವು ಇದ್ದರೆ ಅದನ್ನು ಲಘುವಾಗಿ ಪರಿಗಣಿಸಬೇಡಿ.ಯಾಕೆಂದರೆ ಅದೊಂದು ಗಂಭೀರ ಸಮಸ್ಯೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಯಾಕೆಂದ್ರೆ ಮಲಬದ್ಧತೆ, ಫುಡ್ ಪಾಯ್ಸನ್ ಮತ್ತು ಹೊಟ್ಟೆ ಜ್ವರ ಅನೇಕ ಇತರ ಕಾಯಿಲೆಗಳ ಲಕ್ಷಣವೂ ಆಗಿದೆ. ಕಿಬ್ಬೊಟ್ಟೆಯ ನೋವಿಗೆ ಕೂಡ ಅನೇಕ ಕಾರಣಗಳಿವೆ ಎಂದು ತಜ್ಞರು ಹೇಳುತ್ತಾರೆ, ಹಾಗಾಗಿ ಸಮಸ್ಯೆ ಗಂಭೀರವಾಗಬಹುದು.
ಅತಿಸಾರ ಅಥವಾ ವಾಂತಿ ಸಮಸ್ಯೆಯು 24 ಗಂಟೆಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ ಎಚ್ಚರದಿಂದಿರಿ. ನಿರಂತರ ಜ್ವರ, ತೀವ್ರವಾದ ನೋವು, ಹಸಿವಿನ ಕೊರತೆ, ತೂಕ ನಷ್ಟ, ವಾಂತಿ, ಮೂತ್ರ ಮತ್ತು ಮಲದಲ್ಲಿ ರಕ್ತವು ಗಂಭೀರ ಅನಾರೋಗ್ಯದ ಲಕ್ಷಣ.
ವಾರ ಕಳೆದ್ರೂ ಹೊಟ್ಟೆ ನೋವು ಪರಿಹಾರವಾಗದೇ ಇದ್ದರೆ, ಅದು ಅಸಹನೀಯವಾಗಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಹೊಟ್ಟೆ ನೋವು ಕೇವಲ ಹೊಟ್ಟೆಗೆ ಮಾತ್ರ ಸಂಬಂಧಿಸಿದ ಸಮಸ್ಯೆಯಾಗಿರುವುದಿಲ್ಲ. ಹತ್ತಿರದ ಯಾವುದೇ ಅಂಗದಲ್ಲಿ ನೋವು ಇದ್ದರೆ, ಅದು ನಿಮ್ಮ ಪಕ್ಕೆಲುಬುಗಳು ಮತ್ತು ಸೊಂಟದ ಮೇಲೆ ಪರಿಣಾಮ ಬೀರಬಹುದು.
ಹೊಟ್ಟೆ ನೋವಿನ ಕಾರಣಗಳು ಮತ್ತು ಲಕ್ಷಣಗಳು
ಕೊಲೆಸಿಸ್ಟೈಟಿಸ್: ಪಿತ್ತಕೋಶದಲ್ಲಿ ಊತವಿದ್ದಾಗ ಹೊಟ್ಟೆನೋವು ಬರುತ್ತದೆ. ಶೀತ, ಜ್ವರದಿಂದಲೂ ಈ ಸಮಸ್ಯೆ ಬರುತ್ತದೆ. ಆಹಾರವನ್ನು ಸೇವಿಸಿದ ನಂತರ ನೋವು ಉಂಟಾಗುತ್ತದೆ.
ಮೇದೋಜೀರಕ ಗ್ರಂಥಿಯ ಉರಿಯೂತ: ಮೇದೋಜ್ಜೀರಕ ಗ್ರಂಥಿಯಲ್ಲಿ ಉರಿಯೂತವಿದ್ದಾಗ ಹೊಟ್ಟೆಯ ಮೇಲಿನ ಮಧ್ಯ ಭಾಗದಲ್ಲಿ ನೋವು ಪ್ರಾರಂಭವಾಗುತ್ತದೆ. ಹಿಂಭಾಗ ಮತ್ತು ಎದೆಯವರೆಗೂ ಇದು ಆವರಿಸಿಕೊಳ್ಳಬಹುದು. ಹೃದಯ ಬಡಿತದಲ್ಲಿ ಏರಿಕೆ, ಹೊಟ್ಟೆಯ ಊತ, ನೋವು, ವಾಂತಿ, ಜ್ವರ ಇವೆಲ್ಲವೂ ಇದರ ಪ್ರಮುಖ ಲಕ್ಷಣಗಳು.
ಕರುಳಿನ ಸಮಸ್ಯೆ: ಇದು ಗಂಭೀರ ಕಾಯಿಲೆ ಎನಿಸದೇ ಇದ್ದರೂ ನಿಮ್ಮನ್ನು ಕಾಡುತ್ತದೆ. ಇದರಿಂದಾಗಿ ಹೊಟ್ಟೆಯ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಮಲಬದ್ಧತೆ, ಗ್ಯಾಸ್, ಅತಿಸಾರ, ಹೊಟ್ಟೆ ಉಬ್ಬರಿಸುವುದು, ಮತ್ತು ಹೊಟ್ಟೆ ಸೆಳೆತದಂತಹ ಸಮಸ್ಯೆಗಳಾಗುತ್ತವೆ.