
ಕರ್ನಾಟಕದಿಂದ ಗೋವಾಕ್ಕೆ ತೆರಳುವ ಟ್ಯಾಕ್ಸಿ ಚಾಲಕರು ಗಡಿ ದಾಟಲು ವಿಶೇಷ ಪರವಾನಿಗೆ ಪಡೆಯಲೇಬೇಕು. ಹಾಗೇನಾದ್ರೂ ಪರವಾನಿಗೆ ಪಡೆಯದೇ ನುಸುಳಲು ಯತ್ನಿಸಿದ್ರೆ 10,000 ರೂಪಾಯಿ ದಂಡ ವಿಧಿಸಲಾಗುವುದು.
ಕಳೆದ ವಾರ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ 40 ಟ್ಯಾಕ್ಸಿಗಳು ಗಡಿ ದಾಟಲು ವಿಶೇಷ ಪರವಾನಗಿಯನ್ನು ಪಡೆದಿರಲಿಲ್ಲ. ಇವರೆಲ್ಲ 10,000 ರೂಪಾಯಿ ದಂಡ ಪಾವತಿಸಬೇಕಾಗಿ ಬಂದಿದೆ.
ಬೆಂಗಳೂರಿನಲ್ಲಿರುವ ರಾಜ್ಯ ಸಾರಿಗೆ ಪ್ರಾಧಿಕಾರ ಮತ್ತು ಇತರ ಜಿಲ್ಲೆಗಳಲ್ಲಿ ಆರ್‌ಟಿಒಗಳು ದೀರ್ಘ ವಾರಾಂತ್ಯದಲ್ಲಿ ಮುಚ್ಚಿದ್ದರಿಂದ ಟ್ಯಾಕ್ಸಿ ಚಾಲಕರು ಪರವಾನಗಿ ಪಡೆಯಲು ವಿಫಲರಾಗಿದ್ದಾರೆ. ಇನ್ನೊಂದು ಸಮಸ್ಯೆ ಅಂದ್ರೆ ವಿಶೇಷ ಪರವಾನಗಿಗಳನ್ನು ಪಡೆಯಲು ಕರ್ನಾಟಕ ಸಾರಿಗೆ ಇಲಾಖೆ ಆನ್‌ಲೈನ್ ಪೋರ್ಟಲ್ ಹೊಂದಿಲ್ಲ. ಪರ್ಮಿಟ್‌ಗಾಗಿ ಚಾಲಕರು 100-200 ರೂಪಾಯಿ ಖರ್ಚು ಮಾಡಬೇಕು.
ಬೆಂಗಳೂರಿನ ಶಾಂತಿನಗರದಲ್ಲಿರುವ ಆರ್‌ಟಿಒ ಕಚೇರಿ ಮತ್ತು ರಾಜ್ಯದ ಇತರ ಭಾಗಗಳಲ್ಲಿರೋ ಆರ್‌ಟಿಒಗಳಲ್ಲಿ ಇದನ್ನು ಪಡೆಯಬಹುದು. ಟ್ಯಾಕ್ಸಿ ಚಾಲಕರು ಚೆಕ್ ಪೋಸ್ಟ್‌ನಲ್ಲಿ ಕೂಡ ಪರ್ಮಿಟ್ ಪಡೆಯಲು ಅವಕಾಶವಿದೆ ಎಂದುಕೊಂಡು ಗೋವಾಗೆ ಹೊರಟು ಬಿಟ್ಟಿದ್ದಾರೆ. ಆದ್ರೆ ಈ ತಿಂಗಳ ಆರಂಭದಲ್ಲೇ ಚೆಕ್‌ಪೋಸ್ಟ್‌ನಲ್ಲಿ ಪರ್ಮಿಟ್ ನೀಡುವುದನ್ನು ನಿಲ್ಲಿಸಲಾಗಿತ್ತು.
ನೆರೆಯ ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಆನ್‌ಲೈನ್ ಮೂಲಕ ವಿಶೇಷ ಪರವಾನಗಿ ಪಡೆಯಬಹುದು. ಆದರೆ ಕರ್ನಾಟಕ ಇನ್ನೂ ಈ ವಿಧಾನವನ್ನು ಅಳವಡಿಸಿಕೊಂಡಿಲ್ಲ. ಇದರಿಂದ ಪ್ರವಾಸಿಗರ ಜೇಬಿಗೆ ಕತ್ತರಿ ಬೀಳ್ತಾ ಇದೆ. ಟ್ಯಾಕ್ಸಿ ಚಾಲಕರಿಗೆ ವಿಧಿಸೋ ದಂಡವನ್ನು ಪ್ರವಾಸಿಗರು ಭರ್ತಿ ಮಾಡಬೇಕಾಗಿ ಬಂದಿದೆ. ವ್ಯಾನ್‌ಗಳು ಮತ್ತು ಟೂರಿಸ್ಟ್ ಬಸ್‌ಗಳಂತಹ ದೊಡ್ಡ ವಾಹನಗಳಿಗೆ ಇನ್ನೂ ಹೆಚ್ಚಿನ ಮೊತ್ತದ ದಂಡ ವಿಧಿಸಲಾಗ್ತಿದೆ.
ಪರ್ಮಿಟ್ ಇಲ್ಲದೆ ಬಂದ್ರೆ ಟ್ಯಾಕ್ಸಿಗಳಿಗೆ 10,000, ವ್ಯಾನ್‌ಗೆ 17,000 ಮತ್ತು ಪ್ರವಾಸಿ ಬಸ್‌ಗಳಿಗೆ 25,000 ರೂಪಾಯಿ ದಂಡ ಹಾಕಲಾಗುತ್ತದೆ. ಸಾರಿಗೆ ಇಲಾಖೆ ಈಗಾಗಲೇ ಆನ್‌ಲೈನ್‌ನಲ್ಲಿ ರಾಜ್ಯದ ವಾಹನಗಳಿಗೆ ವಿಶೇಷ ಪರ್ಮಿಟ್ ನೀಡಲು ಆರಂಭಿಸಿದೆಯಂತೆ. ಆದ್ರೆ ಚೆಕ್‌ಪೋಸ್ಟ್‌ಗಳಲ್ಲಿ ಕನೆಕ್ಟಿವಿಟಿ ಇಲ್ಲದೇ ಇರುವುದರಿಂದ ಸಮಸ್ಯೆ ಬಗೆಹರಿದಿಲ್ಲ.