ಬೇಸಿಗೆ ಶುರುವಾಗಿರೋದ್ರಿಂದ ಬಾಯಾರಿಕೆಯಾಗೋದು ಸಹಜ. ಸೆಖೆಗಾಲದಲ್ಲಿ ಹೆಚ್ಹೆಚ್ಚು ನೀರು ಕುಡಿಯೋದು ಒಳ್ಳೆಯದು. ಆದ್ರೆ ಅತಿಯಾದ ಬಾಯಾರಿಕೆ ಬಗ್ಗೆ ಎಚ್ಚರ ವಹಿಸುವುದು ಕೂಡ ಅತಿ ಅಗತ್ಯ. ಯಾಕಂದ್ರೆ ಅದು ಮಧುಮೇಹದ ಆರಂಭಿಕ ಹಂತವಾಗಿರಲೂಬಹುದು. ವಿಪರೀತ ಬಾಯಾರಿಕೆಯಾಗುತ್ತಿದ್ದರೆ ತಕ್ಷಣವೇ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರೀಕ್ಷಿಸಿಕೊಳ್ಳಿ.
ರಕ್ತದಲ್ಲಿ ಸಕ್ಕರೆಯ ಪ್ರಮಾಣವು ಹೆಚ್ಚಾದಾಗ, ಮೂತ್ರಪಿಂಡಗಳು ಅದನ್ನು ಸುಲಭವಾಗಿ ಫಿಲ್ಟರ್ ಮಾಡಲು ಸಾಧ್ಯವಾಗುವುದಿಲ್ಲ. ಆಗ ದೇಹದಲ್ಲಿ ನೀರಿನ ಕೊರತೆಯಿಂದಾಗಿ, ಪದೇ ಪದೇ ಬಾಯಾರಿಕೆಯಾಗುತ್ತದೆ. ವಿಪರೀತವಾದ ಹಸಿವಾದರೆ ಅದು ಕೂಡ ಮಧುಮೇಹದ ಸಂಕೇತವಾಗಿರಬಹುದು. ಮಧುಮೇಹ ರೋಗಿಗಳ ತೂಕವು ವೇಗವಾಗಿ ಕಡಿಮೆಯಾಗುತ್ತದೆ.
ಅಧಿಕ ಬ್ಲಡ್ ಶುಗರ್, ಕೊಬ್ಬಿನ ಶೇಖರಣೆ ಮೇಲೆ ಪರಿಣಾಮ ಬೀರುವುದರಿಂದ ತೂಕ ನಷ್ಟವಾಗಬಹದು. ರಕ್ತದಲ್ಲಿರುವ ಹೆಚ್ಚುವರಿ ಸಕ್ಕರೆಯನ್ನು ಮೂತ್ರಪಿಂಡ ಫಿಲ್ಟರ್ ಮಾಡಲು ಸಾಧ್ಯವಾಗದೇ ಇರುವುದರಿಂದ ಸಕ್ಕರೆಯ ಅಂಶ ಮೂತ್ರದ ಮೂಲಕ ಹೊರಬರುತ್ತದೆ. ಅತಿಯಾದ ಮೂತ್ರ ವಿಸರ್ಜನೆಯಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗಬಹುದು. ಅತಿಯಾದ ಆಯಾಸ, ತಲೆನೋವು, ಮಂದ ದೃಷ್ಟಿ ಮತ್ತು ಜೋರಾದ ಹೃದಯ ಬಡಿತ ಇವು ಕೂಡ ಶುಗರ್ ಲಕ್ಷಣಗಳಾಗಿವೆ. ಇಂತಹ ಯಾವುದೇ ಸಮಸ್ಯೆಗಳು ನಿಮ್ಮಲ್ಲಿದ್ದರೆ ಕೂಡಲೇ ಶುಗರ್ ಟೆಸ್ಟ್ ಮಾಡಿಸಿಕೊಳ್ಳಿ.