ಹಲವರು ಕ್ರೇಜ್ ಗಾಗಿ ಕಾರು, ಬೈಕು ಸೇರಿದಂತೆ ತಮ್ಮ ವಾಹನಗಳಲ್ಲಿ ಹೈಬೀಮ್ ಲೈಟುಗಳನ್ನು ಬಳಸುತ್ತಾರೆ. ಆದರೆ ಎದುರಿನಿಂದ ಬರುತ್ತಿರುವವರಿಗೆ ಇದರಿಂದ ಎಷ್ಟು ತೊಂದರೆ ಎಂಬುದನ್ನು ಪರಿಗಣಿಸುವುದಿಲ್ಲ.
ಈ ಹೈ ಬೀಮ್ ಲೈಟುಗಳ ಬಳಕೆಯಿಂದ ಸಾಕಷ್ಟು ಅಪಘಾತಗಳು ಸಹ ಸಂಭವಿಸಿವೆ. ಹೀಗಾಗಿ ಇಂಥವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.
ಸಾರಿಗೆ ಸಚಿವ ಬಿ ಶ್ರೀರಾಮುಲು ಈ ಕುರಿತಂತೆ ಮಾಹಿತಿ ನೀಡಿದ್ದು, ಕಾರು, ಬೈಕ್ ಸೇರಿದಂತೆ ಯಾವುದೇ ಮಾದರಿಯ ವಾಹನಗಳ ಹೆಡ್ ಲೈಟ್ ಗಳಲ್ಲಿ ಹೈ ಬೀಮ್ ಬಳಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಹೈ ಬೀಮ್ ಲೈಟ್ ಹಾಕಿಕೊಂಡು ಬರುವ ಟ್ರಕ್, ಕಾರು, ಬೈಕ್ ಸವಾರರಿಗೆ ಈಗಾಗಲೇ 500 ರೂಪಾಯಿಗಳ ದಂಡ ವಿಧಿಸಲಾಗುತ್ತಿದ್ದು, ಇನ್ನು ಮುಂದೆ ಕೇಸ್ ಸಹ ದಾಖಲಿಸಲಾಗುತ್ತದೆ ಎಂದು ಶ್ರೀರಾಮುಲು ಮಾಹಿತಿ ನೀಡಿದ್ದಾರೆ.