ಜಗತ್ತಿನ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ ಇತ್ತೀಚಿನ ದಿನಗಳಲ್ಲಿ ಸೈಬರ್ ಖದೀಮರ ಮೆಚ್ಚಿನ ತಾಣವಾಗಿಬಿಟ್ಟಿದೆ.
ತನ್ನ ಅಪ್ಲಿಕೇಶನ್‌ನ ದುರ್ಬಳಕೆಯ ಸಾಧ್ಯತೆಗಳನ್ನು ಸದಾ ಮನಗಾಣುವ ಮೆಟಾದ ಅಂಗಸಂಸ್ಥೆ ವಾಟ್ಸಾಪ್ ಆಗಾಗ ಭದ್ರತೆ ಹಾಗೂ ಖಾಸಗಿತನ ಖಾತ್ರಿಪಡಿಸುವ ಅನೇಕ ಫೀಚರ್‌ಗಳನ್ನು ತರುತ್ತಲೇ ಇರುತ್ತದೆ. ಆದರೂ ಸಹ ಭಾರೀ ಚಾಲಾಕಿ ಹ್ಯಾಕರ್‌ಗಳು ಏನಾದರೂ ಮಾಡಿ, ಈ ರಕ್ಷಣಾ ಗೋಡೆಗಳನ್ನು ಭೇದಿಸಲು ನೋಡುತ್ತಲೇ ಇರುತ್ತಾರೆ.
ಇಂಥದ್ದೇ ನಿದರ್ಶನವೊಂದರಲ್ಲಿ, ಬ್ರಿಟನ್‌ನ ವಂಚಕರ ಗುಂಪೊಂದು “ಹಲೋ ಮಾಮ್” ಅಥವಾ “ಹಲೋ ಡ್ಯಾಡ್” ಎಂಬ ಸರಳ ಸಂದೇಶಗಳನ್ನು ಕಳುಹಿಸಿ, ಇದರ ಬೆನ್ನಿಗೇ ತುರ್ತು ಮನವಿಯೊಂದನ್ನ ಮಾಡಿಕೊಂಡು, ಶೀಘ್ರವೇ ತಮ್ಮ ಖಾತೆಗೆ ದುಡ್ಡು ಕಳುಹಿಸುವ ಮೂಲಕ ಸಂಕಷ್ಟದಲ್ಲಿರುವ ತಮ್ಮ ಮಗುವನ್ನು ರಕ್ಷಿಸಲು ನೆರವಾಗುವಂತೆ ಕೋರುತ್ತದೆ. ಇಂಥ ಸಂದೇಶಗಳನ್ನು ನಂಬಿ ದುಡ್ಡು ಕಳುಹಿಸುವ ಮುಗ್ಧ ಮಂದಿಯಿಂದ ಇದುವರೆಗೂ ಈ ವಂಚಕರು ಕೆಲವೇ ತಿಂಗಳುಗಳಲ್ಲಿ 50,000 ಪೌಂಡ್‌ಗಳನ್ನು ಕಿತ್ತಿದ್ದಾರೆ.
ತನ್ನ ಮಗ ಸಂಕಷ್ಟದಲ್ಲಿ ಸಿಲುಕಿ ಹಣಕಾಸಿನ ನೆರವು ಕೇಳುತ್ತಿದ್ದಾನೆ ಎಂದು ನಂಬಿಯೇ ಬಿಟ್ಟಿದ್ದ ವ್ಯಕ್ತಿಯೊಬ್ಬರು ಈ ಟ್ರ‍್ಯಾಪ್‌ಗೆ 3,000ಪೌಂಡ್‌ಗಳನ್ನು ಕಳೆದುಕೊಂಡಿದ್ದಾರೆ.
ಇಂಥ ಸಂದೇಶಗಳು ಬರುವ ಸಾಧ್ಯತೆ ಇರುವ ಕಾರಣ, ಅನುಮಾನ ಬಂದ ಸಂದೇಶಗಳನ್ನು ಎರಡು ಬಾರಿ ಪರಿಶೀಲಿಸಿ ನೋಡಲು ವಾಟ್ಸಾಪ್ ಬಳಕೆದಾರರಿಗೆ ತಿಳಿಸಲಾಗಿದೆ.