ಕೊರೋನ ವೈರಸ್ ಸಾಂಕ್ರಾಮಿಕ ರೋಗವು ಜಗತ್ತಿಗೆ ಕಾಲಿಟ್ಟು ಸುಮಾರು ಎರಡು ವರ್ಷಗಳು ಕಳೆದಿವೆ. ಕೊರೋನಾದೊಂದಿಗೆ ಅದರ ರೂಪಾಂತರಿಯು ಮತ್ತಷ್ಟು ಅಪಾಯಕಾರಿಯಾಗಿ ಪರಿಣಮಿಸಿದ್ದು, ಈಗಾಗಲೇ ಮೂರು ಅಲೆಗಳೊಂದಿಗೆ ಜನರ ಜೀವನ ತತ್ತರಿಸಿದೆ. ಇತ್ತೀಚೆಗೆ ಓಮಿಕ್ರಾನ್ ರೂಪಾಂತರವು ವ್ಯಾಪಕವಾಗಿ ಹರಡಿತ್ತು. ಇದು ಮೊದಲಿಗೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಯಿತು.
ಇದೀಗ, ಕೋವಿಡ್-19 ಪ್ರಕರಣಗಳು ಕ್ಷೀಣಿಸುತ್ತಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಇದೀಗ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರದ (ಐಐಟಿ-ಕೆ) ತಜ್ಞರು ಮತ್ತೊಂದು ಎಚ್ಚರಿಕೆಯನ್ನು ನೀಡಿದ್ದಾರೆ. ಕೋವಿಡ್ ನಾಲ್ಕನೇ ಅಲೆಯು 2022ರ ಜೂನ್ 22 ರಂದು ದೇಶವನ್ನು ಅಪ್ಪಳಿಸಬಹುದೆಂದು ಹೇಳಿದ್ದಾರೆ. ಹಾಗೂ ಅಕ್ಟೋಬರ್ 24 ರವರೆಗೆ ಕೋವಿಡ್ ಭೀತಿ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
ತಜ್ಞರ ಪ್ರಕಾರ, ಕೋವಿಡ್ 4ನೇ ಅಲೆಯು ನಾಲ್ಕು ತಿಂಗಳವರೆಗೆ ಇರುತ್ತದೆ. ಇದು ಆಗಸ್ಟ್ 15 ರಿಂದ 31ರ ವರೆಗೆ ಗರಿಷ್ಠ ಮಟ್ಟವನ್ನು ತಲುಪುತ್ತದೆ ಎಂದು ಹೇಳಿದ್ದಾರೆ. ಮೊದಲ ಮತ್ತು ಎರಡನೆಯ ಕೋವಿಡ್ ಅಲೆಗಳು ಪ್ರಕ್ಷುಬ್ಧವಾಗಿದ್ದರೂ, ಮೂರನೇ ಅಲೆ ಒಮಿಕ್ರಾನ್ ರೂಪಾಂತರಿಯು ಕಡಿಮೆ ತೀವ್ರತೆಯನ್ನು ಹೊಂದಿತ್ತು.
ಕೋವಿಡ್ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಜಾಗೃತರಾಗಿರುವುದು ಮುಖ್ಯ ಎಂದು ತಜ್ಞರು ಹೇಳಿದ್ದಾರೆ. ಪ್ರತಿಯೊಬ್ಬರೂ ಮುಖಗವಸುಗಳನ್ನು ಧರಿಸುವುದು, ನೈರ್ಮಲ್ಯ ಅನುಸರಿಸುವುದು, ಸಂಪರ್ಕವನ್ನು ಸೀಮಿತಗೊಳಿಸುವುದು, ವಿಶೇಷವಾಗಿ ಜನನಿಬಿಡ ಪ್ರದೇಶಗಳಲ್ಲಿ ಸೋಂಕನ್ನು ತಡೆಗಟ್ಟಲು ಉತ್ತಮ ಮಾರ್ಗವಾಗಿದೆ.
ಸಾರ್ಸ್ ಕೋವ್-2 ವೈರಸ್ ಉಸಿರಾಟದ ಕಾಯಿಲೆಯಾಗಿದ್ದು, ಇದು ದೇಹದ ಇತರ ಭಾಗಗಳಿಗೂ ಹಾನಿಯನ್ನುಂಟುಮಾಡುತ್ತದೆ. ವೈರಸ್ ವಿಭಿನ್ನ ಜನರ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಕೆಲವರಲ್ಲಿ ಅನಾರೋಗ್ಯವನ್ನು ಉಂಟುಮಾಡಿದ್ರೆ, ಇತರರು ಲಕ್ಷಣರಹಿತವಾಗಿರುತ್ತಾರೆ.