ವೃತ್ತಿಜೀವನದಲ್ಲಿ ಯಶಸ್ವಿಯಾಗಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತದೆ. ಇದಕ್ಕಾಗಿಯೇ ಹಗಲಿರುಳು ಶ್ರಮಿಸುತ್ತಾರೆ. ಕಛೇರಿಯಲ್ಲಿ ಕೆಲಸ ಮಾಡುವಾಗ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸಿದರೆ ಯಶಸ್ಸು ತಂತಾನೇ ನಿಮ್ಮನ್ನು ಅರಸಿಕೊಂಡು ಬರುತ್ತದೆ. ಕಚೇರಿಯಲ್ಲಿ ನೀವು ಮಾಡಬಾರದಂತಹ ಕೆಲವು ತಪ್ಪುಗಳ ಬಗ್ಗೆ ತಿಳಿದುಕೊಳ್ಳೋಣ.
ಕಚೇರಿಯಲ್ಲಿ ಯಾರೊಂದಿಗೂ ನಿಮ್ಮ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳಬೇಡಿ. ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನ ಪ್ರತ್ಯೇಕವಾಗಿರಬೇಕು. ವೈಯಕ್ತಿಕ ವಿಚಾರ ಹಂಚಿಕೊಂಡರೆ ನಿಮ್ಮ ಬಗ್ಗೆ ವದಂತಿಗಳು ಹರಡಬಹುದು. ಅದು ನಿಮ್ಮ ಇಮೇಜ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಕಚೇರಿಯಲ್ಲಿ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಬೇಕು. ಸಮಯಕ್ಕೆ ಸರಿಯಾಗಿ ಕಛೇರಿಗೆ ಆಗಮಿಸುವುದು ನಿಮ್ಮನ್ನು ವೃತ್ತಿಪರರನ್ನಾಗಿಸುತ್ತದೆ. ನೀವು ಸಮಯ ಪಾಲನೆ ಮಾಡದಿದ್ದರೆ ಅದು ನಿಮ್ಮ ವ್ಯಕ್ತಿತ್ವದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. 5 ನಿಮಿಷ ಮೊದಲೇ ಕಚೇರಿಗೆ ಹಾಜರಾದರೆ ಉತ್ತಮ.
ನೀವು ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಸಭ್ಯ ಮತ್ತು ಸಹಾಯಕವಾದ ಮನೋಭಾವವನ್ನು ಅಳವಡಿಸಿಕೊಳ್ಳಬೇಕು. ಕಚೇರಿಯಲ್ಲಿ ಫೋನ್‌ನಲ್ಲಿ ಹೆಚ್ಚು ಸಮಯ ಕಳೆಯಬೇಡಿ. ಕೆಲಸದ ಸಮಯದಲ್ಲಿ ನೀವು ದೀರ್ಘಕಾಲದವರೆಗೆ ಫೋನ್ ವೀಕ್ಷಿಸುತ್ತ ಅಥವಾ ಮಾತನಾಡುತ್ತ ಕುಳಿತರೆ ನಿಮ್ಮ ಬಗ್ಗೆ ಸದಭಿಪ್ರಾಯವಿರುವುದಿಲ್ಲ. ತಕ್ಷಣ ಈ ಅಭ್ಯಾಸವನ್ನು ಬದಲಿಸಿಕೊಳ್ಳಿ.
ಕಚೇರಿಯಲ್ಲಿ ನಿಮ್ಮ ಮೇಜಿನ ಸುತ್ತಮುತ್ತ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ನಿಮ್ಮ ಟೇಬಲ್ ಅನ್ನೇ ಕೊಳಕಾಗಿ ಇಟ್ಟುಕೊಂಡರೆ ನೀವು ವೃತ್ತಿಪರರಲ್ಲ ಎಂಬ ಭಾವನೆ ಬರಬಹುದು. ಹಾಗಾಗಿ ಟೇಬಲ್ ಅನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳುವುದು ನಿಮ್ಮ ಕೆಲಸದ ಬಗ್ಗೆ ನೀವು ಜಾಗೃತರಾಗಿರುವಿರಿ ಎಂದು ತೋರಿಸುತ್ತದೆ. ಏಕೆಂದರೆ ಇದು ನಿಮ್ಮ ವ್ಯಕ್ತಿತ್ವಕ್ಕೆ ನೇರವಾಗಿ ಸಂಬಂಧಿಸಿದೆ. ಈ ವಿಚಾರಗಳ ಬಗ್ಗೆ ಗಮನ ಹರಿಸಿದಲ್ಲಿ ನಿಮ್ಮ ಇನ್‌ಕ್ರಿಮೆಂಟ್ ಅಥವಾ ಭಡ್ತಿ ಶತಸಿದ್ಧ.