ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಮೂಲಕ ವಂಚನೆ ಮಾಡೋದು ಮಾಮೂಲಿಯಾಗಿಬಿಟ್ಟಿದೆ. ವಂಚಕರು ನಿಮಗೆ ಆನ್‌ಲೈನ್ ಮೂಲಕ ಮೋಸ ಮಾಡಲು ನೂರಾರು ಮಾರ್ಗಗಳಿವೆ. ಅವುಗಳಲ್ಲಿ ಲೇಟೆಸ್ಟ್ ಅಂದರೆ ವಿಡಿಯೋ ಕಾಲ್. ವೀಡಿಯೊ ಕಾಲ್ ಮಾಡಿ ನಂತರ ಬ್ಲಾಕ್ ಮೇಲ್ ಮಾಡೋದನ್ನೇ ವಂಚಕರು ಕರಗತ ಮಾಡಿಕೊಳ್ತಿದ್ದಾರೆ.
ವಂಚಕರು ಅನಾಮಧೇಯ ನಂಬರ್‌ನಿಂದ ಕರೆ ಮಾಡ್ತಾರೆ. ಅದನ್ನು ಸ್ವೀಕರಿಸಿದಾಕ್ಷಣ ಅರೆನಗ್ನ ಸ್ಥಿತಿಯಲ್ಲಿ ಯುವತಿಯೊಬ್ಬಳು ಕಾಣಿಸಿಕೊಳ್ತಾಳೆ. ನೀವು ಅಲರ್ಟ್ ಆಗುವಷ್ಟರಲ್ಲಿ ವಂಚಕರು ಸ್ಕ್ರೀನ್ ಶಾಟ್ ತೆಗೆದು, ಫೋಟೋಗಳನ್ನು ಮಾರ್ಫ್ ಮಾಡಿ ಅದನ್ನು ಬಳಸಿಕೊಂಡು ಬ್ಲಾಕ್‌ಮೇಲ್ ಮಾಡ್ತಾರೆ. ಈ ವರ್ಷದ ಆರಂಭದಲ್ಲಿ ಇಂತಹ ಹಲವಾರು ಪ್ರಕರಣಗಳು ವರದಿಯಾಗಿವೆ. ಫೋಟೋ ಇಟ್ಟುಕೊಂಡು ಬೆದರಿಸುವ ವಂಚಕರು ಸಾವಿರಾರು ರೂಪಾಯಿ ಹಣ ಕೇಳ್ತಾರೆ.
ಸುಮಾರು 55,000 ರೂಪಾಯಿವರೆಗೆ ಪಾವತಿಸುವಂತೆ ಇಂಟರ್ನೆಟ್ ಬಳಕೆದಾರರನ್ನು ಬ್ಲಾಕ್‌ಮೇಲ್ ಮಾಡಲಾಗಿದೆ. ಅನಾಮಧೇಯ ಕರೆಗಳನ್ನು ಸ್ವೀಕರಿಸುವ ಮುನ್ನ ಬಳಕೆದಾರರು ಜಾಗರೂಕರಾಗಿರಬೇಕು. ಫೋನ್‌ಗೆ ಉತ್ತರಿಸಿದಾಗ ವಿಡಿಯೊ ಕರೆಯಲ್ಲಿ ಅರೆಬೆತ್ತಲೆ ಹುಡುಗಿ ಸ್ವಾಗತಿಸುತ್ತಾಳೆ. ಸ್ಕ್ಯಾಮರ್‌ಗಳು ವಿಡಿಯೊಗಳನ್ನು ರೆಕಾರ್ಡ್ ಮಾಡುತ್ತಾರೆ ಅಥವಾ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳುತ್ತಾರೆ. ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ.
ಫೋಟೋಗಳು ಅಥವಾ ವೀಡಿಯೊಗಳನ್ನು ಪೋಸ್ಟ್ ಮಾಡುವುದನ್ನು ತಡೆಯಲು ದೊಡ್ಡ ಮೊತ್ತ ಪಾವತಿಸುವಂತೆ ಬ್ಲಾಕ್‌ಮೇಲ್ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ವಂಚಕರು. ಇಂತಹ ವಂಚನೆಗಳು ಡೇಟಿಂಗ್ ಆ್ಯಪ್‌ಗಳು ಮತ್ತು ವಾಟ್ಸಾಪ್‌ನಂತಹ ವಿಡಿಯೊ ಕರೆಗಳಲ್ಲಿ ವ್ಯಾಪಕವಾಗಿವೆ. COVID-19 ಸಾಂಕ್ರಾಮಿಕ ಆರಂಭವಾದಾಗ ಇಂತಹ ಘಟನೆಗಳು ಹೆಚ್ಚಾಗಿದ್ದವು. 30 ವರ್ಷದ ಯುವಕನಿಗೆ ಇದೇ ರೀತಿ ಅರೆಬೆತ್ತಲೆ ವಿಡಿಯೋ ಕಾಲ್ ಮಾಡಿ 55,000 ರೂಪಾಯಿ ಕೊಡುವಂತೆ ಬ್ಲಾಕ್‌ಮೇಲ್ ಮಾಡಲಾಗಿತ್ತು.
ಈ ಹ್ಯಾಕ್‌ಗಳಿಂದ ರಕ್ಷಿಸಿಕೊಳ್ಳಲು ಅಪರಿಚಿತ ಸಂಖ್ಯೆಗಳಿಂದ ವಿಡಿಯೋ ಕರೆ ಬಂದಾಗ ಅದನ್ನು ಸ್ವೀಕರಿಸಬೇಡಿ. ಬಳಕೆದಾರರು ಪ್ರೈವೇಟ್ ಸೆಟ್ಟಿಂಗ್‌ಗಳನ್ನು ಕೂಡ ಮಾರ್ಪಡಿಸಿಕೊಳ್ಳಬಹುದು. ಯಾವುದೇ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ, ನಿಮ್ಮ ಫೋನ್ ನಂಬರ್, ಇತರ ಖಾತೆ ಐಡಿಗಳು ಮತ್ತು ನಿಮ್ಮ ಕಾಂಟಾಕ್ಟ್‌ಗಳನ್ನು ಯಾರೂ ಪ್ರವೇಶಿಸದಂತೆ ಪ್ರೈವೆಸಿ ಸೆಟ್ಟಿಂಗ್ ಮಾಡಿಕೊಳ್ಳಿ.