ಪ್ರೋಟೀನ್ ಶೇಕ್ ಪ್ರವೃತ್ತಿ ಕ್ರಮೇಣ ಹೆಚ್ಚುತ್ತಿದೆ. ಹೆಚ್ಚಿನ ಜನರು ಜಿಮ್‌ನಲ್ಲಿ ವರ್ಕೌಟ್ ಮಾಡಿದ ಬಳಿಕ ಪ್ರೋಟೀನ್ ಶೇಕ್ ಕುಡಿಯುತ್ತಾರೆ. ಮಕ್ಕಳಿಂದ ಹಿರಿಯರವರೆಗೆ ಎಲ್ಲರೂ ಈ ಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ ಈ ಶೇಕ್‌ಗಳು ನಿಜವಾಗಿಯೂ ಎಲ್ಲರಿಗೂ ಆರೋಗ್ಯಕರವೇ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. 16 ವರ್ಷದ ಬಾಲಕನ ಸಾವಿನ ನಂತರ ಪ್ರೋಟೀನ್ ಶೇಕ್ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ.
ಪ್ರೋಟೀನ್ ಶೇಕ್‌ನಿಂದ ಪ್ರಚೋದಿಸಲ್ಪಟ್ಟ ಆನುವಂಶಿಕ ಸ್ಥಿತಿಯಿಂದಾಗಿ 16 ವರ್ಷದ ಬಾಲಕ ರೋಹನ್ ಗೋಧಾನಿಯಾ ಮೃತಪಟ್ಟಿದ್ದ. ಪ್ರೊಟೀನ್ ಶೇಕ್ ಕುಡಿದು ಮೂರು ದಿನ ಅಸ್ವಸ್ಥನಾಗಿದ್ದ ಆತನ ಮೆದುಳು ಹಾನಿಗೊಳಗಾಗಿತ್ತು. ಇದು 2020 ರಲ್ಲಿ ನಡೆದ ಘಟನೆ. ಪ್ರೊಟೀನ್ ಶೇಕ್ ಸೇವಿಸಿದ್ದರಿಂದ ರೋಹನ್‌ಗೆ ಆರ್ನಿಥಿನ್ ಟ್ರಾನ್ಸ್ ಕಾರ್ಬಮೈಲೇಸ್ ಎಂಬ ಆನುವಂಶಿಕ ಕಾಯಿಲೆ ಬಂದಿತ್ತು. ಇದು ಅಧ್ಯಯನದಲ್ಲಿ ದೃಢಪಟ್ಟಿದೆ.
ಈ ಅಪರೂಪದ ಕಾಯಿಲೆಯು ದೇಹದಲ್ಲಿ ಅಮೋನಿಯ ವಿಭಜನೆಯನ್ನು ನಿಲ್ಲಿಸುತ್ತದೆ. ಇದರಿಂದಾಗಿ ರಕ್ತದಲ್ಲಿ ಅಮೋನಿಯ ಹೆಚ್ಚುತ್ತಲೇ ಹೋಗುತ್ತದೆ. ಪ್ರೋಟೀನ್ ಶೇಕ್‌ನ ಜೀರ್ಣಕ್ರಿಯೆಯ ಪ್ರಕ್ರಿಯೆಯ ನಂತರ ದೇಹದಲ್ಲಿ ಅನೇಕ ರೀತಿಯ ತ್ಯಾಜ್ಯ ವಸ್ತುಗಳು ರೂಪುಗೊಳ್ಳುತ್ತವೆ ಎನ್ನುತ್ತಾರೆ ತಜ್ಞರು. ಹಾಗಾಗಿ ಪ್ರೋಟೀನ್ ಪೌಡರ್‌ಗಳ ಮೇಲೆ ಎಚ್ಚರಿಕೆಯ ಬರಹ ಕಡ್ಡಾಯ ಮಾಡಬೇಕೆಂದು ಎಚ್ಚರಿಸಿದ್ದಾರೆ.
ಪ್ರೋಟೀನ್ ಶೇಕ್ ಆರೋಗ್ಯಕ್ಕೆ ಎಷ್ಟು ಸೂಕ್ತ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಜಿಮ್‌ಗೆ ಹೋಗುವವರು, ವರ್ಕೌಟ್ ಮಾಡುವವರು ಪ್ರೋಟೀನ್ ಶೇಕ್‌ಗಳನ್ನು ಕುಡಿಯುತ್ತಾರೆ. ಆದರೆ ಇದರ ಅತಿಯಾದ ಸೇವನೆಯು ಎಲ್ಲರಿಗೂ ಹಾನಿಕಾರಕ. ಸಾಧ್ಯವಾದಷ್ಟು ನೈಸರ್ಗಿಕ ಪ್ರೋಟೀನ್ ತೆಗೆದುಕೊಳ್ಳಿ ಎನ್ನುತ್ತಾರೆ ಆರೋಗ್ಯ ತಜ್ಞರು. ದೇಹಕ್ಕೆ ಎಷ್ಟು ಪ್ರೋಟೀನ್‌ನ ಅಗತ್ಯವಿದೆ ಎಂಬುದನ್ನು ಅರ್ಥಮಾಡಿಕೊಂಡ ಬಳಿಕವಷ್ಟೆ ಅದನ್ನು ಸೇವನೆ ಮಾಡಬೇಕು.