ಬೆಂಗಳೂರು : ಕೆಪಿಎಸ್ಸಿ ವತಿಯಿಂದ ಡಿ.14ರಂದು ನಡೆದಿದ್ದ ಸಹಾಯಕ ಎಂಜಿನೀಯರ್ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ರೈಲು ವಿಳಂಬದಿಂದಾಗಿ ಹಾಜರಾಗದ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.
ಲೋಕೋಪಯೋಗಿ ಇಲಾಖೆಯಲ್ಲಿನ ಸಹಾಯಕ ಎಂಜಿನೀಯರ್ ಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆದಿತ್ತು. ಹಾಸನ – ಸೊಲ್ಲಾಪುರ ಎಕ್ಸಪ್ರೆಸ್ ಹಾಗೂ ಉದ್ಯಾನ ಎಕ್ಸಪ್ರೆಸ್ ರೈಲಿನ ಮೂಲಕ ಕಲಬುರಗಿಗೆ ತೆರಳಿದ್ದ ಅಭ್ಯರ್ಥಿಗಳು ವಿಳಂಬದಿಂದಾಗಿ ಮೊದಲ ಅವಧಿಯ ಪರೀಕ್ಷೆಯಿಂದ ವಂಚಿತರಾಗಿದ್ದರು. ಅಲ್ಲದೇ, ಬೀದರ್ – ಯಶವಂತಪುರ ರೈಲಿನ ಮೂಲಕ ತೆರಳಿದ್ದ ಅಭ್ಯರ್ಥಿಗಳು ಕೂಡ ಬೆಂಗಳೂರಿನಲ್ಲಿ ಮೊದಲ ಅವಧಿಯ ಪರೀಕ್ಷೆಯಿಂದ ವಂಚಿತರಾಗಿದ್ದರು.
BIG NEWS: ಸಿಎಂ ಬಸವರಾಜ್ ಬೊಮ್ಮಾಯಿ ಕೇಂದ್ರ ಸಚಿವರಾಗಲಿದ್ದಾರೆ; ಅಚ್ಚರಿ ಮೂಡಿಸಿದ ಸಚಿವ ನಿರಾಣಿ ಹೇಳಿಕೆ
ಹೀಗಾಗಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿ, ಮತ್ತೊಮ್ಮೆ ಪರೀಕ್ಷೆ ನಡೆಸುವಂತೆ ಮನವಿ ಮಾಡಿದ್ದರು. ಕೆಪಿಎಸ್ಸಿ ಅಭ್ಯರ್ಥಿಗಳ ಮನವಿಗೆ ಸ್ಪಂದಿಸಿದ್ದು, ಬೆಂಗಳೂರಿನಲ್ಲಿ ಡಿ. 29ರಂದು ಪರೀಕ್ಷೆ ನಡೆಸಲು ನಿರ್ಧರಿಸಿದೆ. ಅಲ್ಲದೇ, ಬೇರೆ ಭಾಗಗಳಲ್ಲಿಯೂ ರೈಲು ವಿಳಂಬದಿಂದಾಗಿ ಬೆಳಗಿನ ಪರೀಕ್ಷೆ ಬರೆಯಲು ವಂಚಿತರಾಗಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು ಎಂದು ಕೆಪಿಎಸ್ಸಿ ಕಾರ್ಯದರ್ಶಿ ಜಿ. ಸತ್ಯವತಿ ಹೇಳಿದ್ದಾರೆ.
ಪರೀಕ್ಷೆಯಿಂದ ವಂಚಿತರಾಗಿರುವ ವಿದ್ಯಾರ್ಥಿಗಳು ತಡವಾಗಿ ತಲುಪಿದ ರೈಲಿನ ಟಿಕೆಟ್ ನ ಪ್ರತಿ ಹಾಗೂ ಆಯೋಗ ನೀಡಿರುವ ಪ್ರವೇಶ ಪತ್ರದ ಪ್ರತಿಯನ್ನು ಆಯೋಗಕ್ಕೆ ಸಲ್ಲಿಸಬೇಕೆಂದು ಆಯೋಗ ಹೇಳಿತ್ತು. ದಾಖಲೆ ಸಲ್ಲಿಸಲು ವಿಫಲವಾದರೆ ಪರೀಕ್ಷೆಗೆ ಹಾಜರಾಗಲು ಅವಕಾಶವಿರುವುದಿಲ್ಲ ಎಂದು ಆಯೋಗ ಹೇಳಿತ್ತು. ಸದ್ಯ ದಾಖಲೆ ಸಲ್ಲಿಸಿದ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಆಯೋಗ ಅವಕಾಶ ನೀಡಿದೆ.