ಬೆಳಗಾವಿ ಭಾಗದಲ್ಲಿ ಎಂಇಎಸ್ ಪುಂಡರ ಕೃತ್ಯ ಮಿತಿ ಮೀರುತ್ತಿರುವ ಮಧ್ಯೆ ರಾಜ್ಯದಲ್ಲಿ ಎಂಇಎಸ್ ಬ್ಯಾನ್ ಮಾಡಬೇಕೆಂಬ ಕೂಗು ಮುನ್ನೆಲೆಗೆ ಬಂದಿದೆ. ಇದರ ನಡುವೆಯೇ ಶಿವಸೇನೆ ನಾಯಕ ಸಂಜಯ್ ರಾವತ್ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಕರ್ನಾಟಕದಲ್ಲಿ ಧೈರ್ಯವಿದ್ದರೆ ಎಂಇಎಸ್ ನ್ನು ನಿಷೇಧಿಸಲಿ ಎಂದು ಅವರು ಬೊಮ್ಮಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ಶಿವಾಜಿ ಹೆಸರಿನಲ್ಲಿ ಮತ ಕೇಳುವ ಬಿಜೆಪಿ, ಬೆಂಗಳೂರಿನಲ್ಲಿ ಶಿವಾಜಿ ಮೂರ್ತಿಗೆ ಮಸಿ ಬಳಿದರೂ ಮೌನ ವಹಿಸಿದೆ. ಆದರೆ, ಇನ್ನೊಂದೆಡೆ ಮೊಘಲರ ವಿರುದ್ಧ ಶಿವಾಜಿ ಮಹಾರಾಜರ ಹೋರಾಟ ಬಣ್ಣಿಸುತ್ತಿದೆ. ಈಗ ಇಷ್ಟೊಂದು ಅವಮಾನವಾದರೂ ಮೌನ ವಹಿಸಿದೆ. ಕೇಂದ್ರದ ಯಾವೊಬ್ಬ ಬಿಜೆಪಿ ಸಂಸದರೂ ಈ ಕುರಿತು ಮಾತನಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ಮರಾಠರ ಸೇವೆ ಮಾಡುತ್ತಿರುವ 200ಕ್ಕೂ ಹೆಚ್ಚು ಎಂಇಎಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಆದರೂ ಬಿಜೆಪಿ ಮೌನ ವಹಿಸಿದೆ. ಬಿಜೆಪಿ ನೇತೃತ್ವದ ಸರ್ಕಾರ ಇರುವ ರಾಜ್ಯದಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಮೌನ ವಹಿಸಿದೆ ಎಂದು ಆರೋಪಿಸಿದ್ದಾರೆ.