ಹಲವಾರು ವರ್ಷಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಅದರ ಹಿಂದಿನ ವಿಲಕ್ಷಣ ಕಾರಣವನ್ನು ಕಂಡುಹಿಡಿದ ನಂತರ ದಿಗ್ಭ್ರಮೆಗೊಂಡಿದ್ದಾರೆ.
38 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ತನ್ನ ಬಲ ಮೂಗಿನ ಹೊಳ್ಳೆಯ ಮೂಲಕ ಉಸಿರಾಡಲು ಹಲವು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದರು. ಹೀಗಾಗಿ ಅಮೆರಿಕಾದ ನ್ಯೂಯಾರ್ಕ್‌ನ ಮೌಂಟ್ ಸಿನಾಯ್‌ನಲ್ಲಿರುವ ಕ್ಲಿನಿಕ್‌ಗೆ ಅವರು ಭೇಟಿ ನೀಡಿದ್ದಾರೆ. ಈ ವೇಳೆ ಸೆಪ್ಟಮ್ ಮತ್ತು ಕ್ಯಾಲ್ಸಿಫೈಡ್ ಸೆಪ್ಟಲ್ ಸ್ಪರ್ಸ್‌ಗಳನ್ನು ಹೊಂದಿದ್ದಾರೆಂದು ಆರಂಭದಲ್ಲಿ ತಿಳಿಸಲಾಯಿತು. ರೈನೋಸ್ಕೋಪಿ ನಡೆಸಿದ ನಂತರ, ವೈದ್ಯರು ಅವರ ಮೂಗಿನ ಹೊಳ್ಳೆಯಲ್ಲಿ ಹಲ್ಲು ಬೆಳೆಯುತ್ತಿರುವುದನ್ನು ಕಂಡುಹಿಡಿದಿದ್ದಾರೆ.
ಸಂಪೂರ್ಣ ಪರೀಕ್ಷೆಯ ನಂತರ ವೈದ್ಯರು ಮೂಗಿನೊಳಗೆ ಹಲ್ಲು ಬೆಳೆದಿರುವುದನ್ನು ಗುರುತಿಸಿದ್ದಾರೆ. ನಂತರ ಅದು ಅಪಸ್ಥಾನೀಯ ಹಲ್ಲು ಎಂದು ಅವರು ತೀರ್ಮಾನಿಸಿದ್ದಾರೆ. ಅಪಸ್ಥಾನೀಯ ಹಲ್ಲುಗಳು ತಪ್ಪು ಸ್ಥಾನದಲ್ಲಿ ಬೆಳೆಯುವ ಹಲ್ಲುಗಳಾಗಿವೆ. ವರದಿ ಪ್ರಕಾರ, ಅಪಸ್ಥಾನೀಯ ಹಲ್ಲುಗಳು ಅತ್ಯಂತ ವಿರಳವಾಗಿದ್ದು, ಇದು ಕೇವಲ 0.1% ಜನಸಂಖ್ಯೆಯಲ್ಲಿ ಕಂಡುಬರುತ್ತದೆ.
ಮೌಖಿಕ ಮತ್ತು ಓಟೋಲರಿಂಗೋಲಾಜಿಕ್ ಶಸ್ತ್ರಚಿಕಿತ್ಸೆ ಮೂಲಕ ವ್ಯಕ್ತಿಯ ಮೂಗಿನಿಂದ ಹಲ್ಲು ತೆಗೆಯಲಾಗಿದೆ. ಇದು 14 ಮಿ.ಮೀ ಉದ್ದವಿತ್ತು. ಇಂಗ್ಲೆಂಡಿನ ಗ್ರಿನ್‌ಸ್ಟೆಡ್‌ನಲ್ಲಿರುವ ರಾಷ್ಟ್ರೀಯ ಆರೋಗ್ಯ ಸೇವೆ ಕ್ವೀನ್ ವಿಕ್ಟೋರಿಯಾ ಆಸ್ಪತ್ರೆಯು ಅಪಸ್ಥಾನೀಯ ಹಲ್ಲುಗಳ ಬಗ್ಗೆ ಮಾಹಿತಿ ನೀಡಿದೆ. ಕೆಲವೊಮ್ಮೆ ಒಂದು ಅಥವಾ ಹೆಚ್ಚು ಹಲ್ಲುಗಳು ತಪ್ಪಾದ ಸ್ಥಿತಿಯಲ್ಲಿ ಬೆಳವಣಿಗೆಯಾಗುತ್ತವೆ.
ಅತ್ಯಂತ ಸಾಮಾನ್ಯವಾದ ಅಪಸ್ಥಾನೀಯ ಹಲ್ಲುಗಳು ಮೇಲಿನ ದವಡೆಯಲ್ಲಿರುವ ಕೋರೆಹಲ್ಲುಗಳಾಗಿವೆ. ಇದರ ಅಪಾಯವೆಂದರೆ ಹಲ್ಲು ಇತರ ವಯಸ್ಕ ಹಲ್ಲುಗಳ ಬೇರುಗಳಿಗೆ ಬಡಿದು ಹಾನಿಯನ್ನುಂಟುಮಾಡುತ್ತದೆ.