ಒಮ್ಮೊಮ್ಮೆ ಬೆಳಗ್ಗೆ ತಿಂಡಿಗೆ ಮಾಡಿದ ಇಡ್ಲಿ ಉಳಿದು ಹೋಗುತ್ತದೆ. ಅದನ್ನು ಬಿಸಾಡ್ಬೇಡಿ, ಅದೇ ಇಡ್ಲಿಯಿಂದ ಸಂಜೆ ಬಿಸಿ ಬಿಸಿಯಾಗಿ ಮಂಚೂರಿ ಮಾಡಿಕೊಂಡು ತಿನ್ಬಹುದು. ಟೇಸ್ಟಿಯಾಗಿ, ಈಸಿಯಾಗಿ ಇಡ್ಲಿ ಮಂಚೂರಿ ಮಾಡೋದು ಹೇಗೆ ನೋಡೋಣ.
ಬೇಕಾಗುವ ಸಾಮಗ್ರಿ :
5 ಇಡ್ಲಿ, ಅರ್ಧ ಕಪ್ ಮೈದಾ, ಕಾಲು ಕಪ್ ಕಾರ್ನ್ ಫ್ಲೋರ್, ಉಪ್ಪು, 1 ಚಮಚ ಕೆಂಪು ಮೆಣಸಿನ ಪುಡಿ, ಕಾಲು ಚಮಚ ಕಾಳು ಮೆಣಸಿನ ಪುಡಿ, 1 ಚಮಚ ಸೋಯಾ ಸಾಸ್, ಕರಿಯಲು ಎಣ್ಣೆ.
ಸಾಸ್ ತಯಾರಿಸಲು 2 ಚಮಚ ಎಣ್ಣೆ, ಸಣ್ಣಗೆ ಹೆಚ್ಚಿದ ಅರ್ಧ ಈರುಳ್ಳಿ, 1 ಇಂಚಿನಷ್ಟು ಉದ್ದದ ಶುಂಠಿ ಸಣ್ಣಗೆ ಹೆಚ್ಚಿದ್ದು, ಹೆಚ್ಚಿದ ಮೂರು ಬೆಳ್ಳುಳ್ಳಿ ಎಸಳು, ಹೆಚ್ಚಿದ ಅರ್ಧ ಕ್ಯಾಪ್ಸಿಕಂ, ಕಾಲು ಕಪ್ ನಷ್ಟು ಟೊಮೆಟೋ ಸಾಸ್, 1 ಚಮಚ ಚಿಲ್ಲಿ ಸಾಸ್, ಉಪ್ಪು, 2 ಚಮಚ ವಿನಿಗರ್, 2 ಚಮಚ ಸೋಯಾ ಸಾಸ್, ಹೆಚ್ಚಿದ 1 ಸ್ಪ್ರಿಂಗ್ ಆನಿಯನ್.
ಮಾಡುವ ವಿಧಾನ :
ಇಡ್ಲಿಯನ್ನು ನಾಲ್ಕು ತುಂಡುಗಳಾಗಿ ಮಾಡಿ ಪಕ್ಕಕ್ಕೆ ಇಟ್ಟುಕೊಳ್ಳಿ. ಒಂದು ದೊಡ್ಡ ಬೌಲ್ ನಲ್ಲಿ ಮೈದಾಹಿಟ್ಟು, ಕಾರ್ನ್ ಫ್ಲೋರ್, ಮೆಣಸಿನ ಪುಡಿ, ಕಾಳುಮೆಣಸಿನ ಪುಡಿ, ಸೋಯಾ ಸಾಸ್, ಉಪ್ಪು ಹಾಕಿ ಮಿಕ್ಸ್ ಮಾಡಿ. ನಂತರ ನೀರನ್ನು ಹಾಕಿ ಮೃದುವಾದ ಹಿಟ್ಟಿನ ಹದಕ್ಕೆ ಕಲೆಸಿ. ಅದರಲ್ಲಿ ಇಡ್ಲಿ ತುಂಡುಗಳನ್ನು ಅದ್ದಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಇಡ್ಲಿ ಗರಿಗರಿಯಾಗಿ ಹೊಂಬಣ್ಣಕ್ಕೆ ಬರಬೇಕು.
ದೊಡ್ಡ ಬಾಣಲೆ ತೆಗೆದುಕೊಂಡು 2 ಚಮಚ ಎಣ್ಣೆ ಹಾಕಿ ಕಾಯಲು ಇಡಿ. ಅದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ 1 ನಿಮಿಷ ಹುರಿಯಿರಿ. ನಂತರ ಶುಂಠಿ, ಬೆಳ್ಳುಳ್ಳಿ, ಬೇಕೆನಿಸಿದಲ್ಲಿ ಹಸಿಮೆಣಸನ್ನೂ ಹಾಕಬಹುದು. ನಂತರ ಕ್ಯಾಪ್ಸಿಕಂ ಹಾಕಿ. ಟೊಮೆಟೋ ಸಾಸ್, ಚಿಲ್ಲಿ ಸಾಸ್, ಉಪ್ಪನ್ನು ಹಾಕಿ ಚೆನ್ನಾಗಿ ತೊಳಸಿ.
ಅದಾದ್ಮೇಲೆ ಸೋಯಾ ಸಾಸ್ ಮತ್ತು ವಿನಿಗರ್ ಸೇರಿಸಿ ಒಂದು ನಿಮಿಷ ಹುರಿಯಿರಿ. ಬಳಿಕ ಕರಿದಿಟ್ಟಿರುವ ಇಡ್ಲಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸಾಸ್ ಸರಿಯಾಗಿ ಇಡ್ಲಿಗೆ ಅಂಟಿಕೊಳ್ಳಬೇಕು. ಅದಕ್ಕೆ ಹೆಚ್ಚಿಟ್ಟಿರುವ ಸ್ಪ್ರಿಂಗ್ ಆನಿಯನ್ ಹಾಕಿ ಅಲಂಕರಿಸಿದ್ರೆ ಲೆಫ್ಟ್ ಓವರ್ ಇಡ್ಲಿಯಿಂದ ಮಾಡಿದ ಬಿಸಿ ಬಿಸಿ ಮಂಚೂರಿ ಸಿದ್ಧ.