ಶುಕ್ರವಾರದಂದು ನಾಡಿದಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಸಣ್ಣಪುಟ್ಟ ವಿಷಯಗಳೆಲ್ಲ ಕೋಮು ಬಣ್ಣ ಪಡೆಯುತ್ತಿರುವ ಮಧ್ಯೆ ವಿಜಯನಗರ ಜಿಲ್ಲೆಯ ಉರ್ದು ಶಾಲೆಯೊಂದರಲ್ಲಿ ಸಡಗರ ಸಂಭ್ರಮದಿಂದ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗಿದೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರದಂದು ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗಿದ್ದು, ಬಹುತೇಕ ಮಕ್ಕಳು ಕೃಷ್ಣ, ರಾಧೆ, ರುಕ್ಮಿಣಿಯರ ವೇಷಭೂಷಣ ಧರಿಸಿ ಸಂಭ್ರಮ ಪಟ್ಟಿದ್ದಾರೆ.
ಈ ಶಾಲೆಯ 94 ವಿದ್ಯಾರ್ಥಿಗಳ ಪೈಕಿ 83 ಮಂದಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿರುವುದು ಗಮನಾರ್ಹ ಸಂಗತಿ. ಕೃಷ್ಣ, ರಾಧೆ, ರುಕ್ಮಿಣಿ ವೇಷಧಾರಿಯಾಗಿದ್ದ ಪುಟ್ಟ ಮಕ್ಕಳು ಗ್ರಾಮದ ಮುಖ್ಯಬೀದಿಗಳಲ್ಲಿ ಹೆಜ್ಜೆ ಹಾಕಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಮುಖ್ಯ ಶಿಕ್ಷಕ ರೆಡ್ಡಿ ನಾಯ್ಕ, ನಮ್ಮ ಶಾಲೆಯಲ್ಲಿ ರಾಷ್ಟ್ರೀಯ ಹಬ್ಬ ಸೇರಿದಂತೆ ಎಲ್ಲ ಹಬ್ಬಗಳನ್ನು ಆಚರಿಸಲಾಗುತ್ತದೆ. ಇದಕ್ಕೆ ವಿದ್ಯಾರ್ಥಿಗಳ ಪೋಷಕರು ಹಾಗೂ ಗ್ರಾಮಸ್ಥರ ಸಹಕಾರವೂ ಇದೆ ಎಂದಿದ್ದಾರೆ.