ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಆಹಾರ ಸಚಿವರಾಗಿದ್ದ ಉಮೇಶ್ ಕತ್ತಿ ಕಳೆದ ರಾತ್ರಿ ವಿಧಿವಶರಾಗಿದ್ದು, ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಂದು ದಿನದ ಶೋಕಾಚರಣೆಗೆ ಸೂಚನೆ ನೀಡಿದೆ.
ಈ ಕುರಿತಂತೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಮೇಶ್ ಕತ್ತಿ ಅವರು ಹಾಲಿ ಸಚಿವರಾಗಿದ್ದರು. ಹೀಗಾಗಿ ಸರ್ಕಾರ ಮೂರು ದಿನಗಳ ಕಾಲ ಶೋಕಾಚರಣೆ ಮಾಡಬೇಕಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಉಮೇಶ್ ಕತ್ತಿ ಅವರ ಅಂತ್ಯಕ್ರಿಯೆಗಾಗಿ ಬೆಳಗಾವಿಗೆ ತೆರಳುವ ಮುನ್ನ ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಮೇಶ್ ಕತ್ತಿ ನನ್ನ ಆತ್ಮೀಯ ಸ್ನೇಹಿತರಾಗಿದ್ದರು. ಅವರು ಸರಳ ಸಜ್ಜನ ವ್ಯಕ್ತಿತ್ವ ಹೊಂದಿದ್ದವರು ಎಂದು ಬಣ್ಣಿಸಿದರು.