ಬೆಳಗಿನ ಉಪಹಾರದಲ್ಲಿ ಉಪ್ಪು ಹೆಚ್ಚಾಗಿದೆ ಅನ್ನೋ ಕಾರಣಕ್ಕೆ ಪತಿ ಮಹಾಶಯ, ತನ್ನ ಪತ್ನಿಯನ್ನೇ ಕೊಂದು ಹಾಕಿದ್ದಾನೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಾಯಂದರ್ ಟೌನ್‌ಶಿಪ್‌ನಲ್ಲಿ ಈ ಘಟನೆ ನಡೆದಿದೆ. ಪತ್ನಿಯನ್ನು ಹತ್ಯೆಗೈದ 46 ವರ್ಷದ ನೀಲೇಶ್ ಎಂಬಾತನನ್ನು ಈಗಾಗ್ಲೇ ಪೊಲೀಸರು ಬಂಧಿಸಿದ್ದಾರೆ.
ಬೆಳಗ್ಗೆ 9.30ರ ಸುಮಾರಿಗೆ ಪತ್ನಿ ನಿರ್ಮಲಾ ಪತಿಗೆ ತಿಂಡಿ ಕೊಟ್ಟಿದ್ದಳು. ಖಿಚಡಿಗೆ ಸ್ವಲ್ಪ ಉಪ್ಪು ಹೆಚ್ಚಾಗಿತ್ತು. ಇದರಿಂದ ನಿಲೇಶ್ ಕೋಪ ಮಾಡಿಕೊಂಡಿದ್ದಾನೆ. ಪತ್ನಿ ನಿರ್ಮಲಾಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಟ್ಟೆಯಿಂದ ಕತ್ತು ಹಿಸುಕಿದ್ದಾನೆಂದು ಪೊಲೀಸರು ಶಂಕಿಸಿದ್ದಾರೆ.
ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ರು. ಆರೋಪಿ ನಿಲೇಶ್‌ನನ್ನ ಈಗಾಗ್ಲೇ ಬಂಧಿಸಿರುವ ಖಾಕಿ ಪಡೆ, ಕಂಬಿ ಹಿಂದೆ ಕೂರಿಸಿದೆ. ಎರಡು ದಿನಗಳ ಹಿಂದಷ್ಟೆ ರಾಬೋಡಿ ಎಂಬಲ್ಲಿ ಇಂಥದ್ದೇ ಘಟನೆ ನಡೆದಿತ್ತು.
ಸಮಯಕ್ಕೆ ಸರಿಯಾಗಿ ಚಹಾದ ಜೊತೆಗೆ ತಿಂಡಿ ನೀಡದಿದ್ದಕ್ಕೆ ಕೋಪಗೊಂಡ ಮಾವ ಸೊಸೆಯ ಮೇಲೆ ಗುಂಡು ಹಾರಿಸಿದ್ದ. ಹೊಟ್ಟೆಗೇ ಗುಂಡು ಬಿದ್ದಿದ್ರಿಂದ 42 ವರ್ಷದ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ.