ಟೀ ಬ್ಯಾಗ್ ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಇರುತ್ತದೆ. 2 ನಿಮಿಷಗಳ ಕಾಲ ಬಿಸಿ ನೀರಿಗೆ ಈ ಟೀ ಬ್ಯಾಗ್ ಅನ್ನು ಅದ್ದಿ ನಂತರ ಇದನ್ನು ಕಸದ ಡಬ್ಬಿಗೆ ಎಸೆದು ಬಿಡುತ್ತಾರೆ. ಹೀಗೆ ಬಿಸಾಡುವ ಬದಲು ಇದನ್ನು ಹೇಗೆಲ್ಲಾ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ನಿಮ್ಮನೆಯ ಕಾರ್ಪೆಟ್ ಕ್ಲೀನ್ ಮಾಡುವುದಕ್ಕೆ ಈ ಟೀ ಬ್ಯಾಗ್ ಅನ್ನು ಉಪಯೋಗಿಸಿಕೊಳ್ಳಬಹುದು. ಹೇಗೆಂದ್ರೆ, ಮೊದಲಿಗೆ ಉಪಯೋಗಿಸಿದ ಈ ಟೀ ಬ್ಯಾಗ್ ಅನ್ನು ಬಿಸಿಲಿನಲ್ಲಿ ಒಣಗಿಸಿ ಅದರೊಳಗಿರುವ ಟೀ ಎಲೆಗಳನ್ನು ತೆಗೆದು ಕೈಯಲ್ಲಿಯೇ ಪುಡಿ ಮಾಡಿಕೊಂಡು ಒಂದು ಬೌಲ್ ಗೆ ಹಾಕಿ ಅದಕ್ಕೆ ಸ್ವಲ್ಪ ಬೇಕಿಂಗ್ ಸೋಡಾ ಮಿಕ್ಸ್ ಮಾಡಿ ಇದನ್ನು ನಿಮ್ಮ ಕಾರ್ಪೆಟ್ ನ ಮೇಲೆ ಸಿಂಪಡಿಸಿ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಕಾರ್ಪೆಟ್ಅನ್ನು ಕ್ಲೀನ್ ಮಾಡಿ. ಅದರಲ್ಲಿ ಬರುವ ವಾಸನೆ ನಿವಾರಣೆಯಾಗುತ್ತದೆ.
ಇನ್ನು ಕಣ್ಣಿನ ಸುತ್ತ ಒಂದು ರೀತಿ ಕಪ್ಪು ವರ್ತುಲಗಳು ಕಾಣಿಸಿಕೊಳ್ಳುತ್ತವೆ. ಇದನ್ನು ನಿವಾರಿಸಲು ಕೂಡ ಟೀ ಬ್ಯಾಗ್ ಸಹಾಯಕಾರಿ. ಉಪಯೋಗಿಸಿದ ಟೀ ಬ್ಯಾಗ್ ಅನ್ನು 15 ನಿಮಿಷಗಳ ಕಾಲ ಫ್ರಿಡ್ಜ್ ನಲ್ಲಿಡಿ. ನಂತರ ಇದನ್ನು ನಿಮ್ಮ ಕಣ್ಣುಗಳ ಮೇಲೆ ಇಟ್ಟುಕೊಂಡು 10 ನಿಮಿಷಗಳ ಕಾಲ ಹಾಗೆಯೇ ಮಲಗಿ.
ಅಡುಗೆ ಮಾಡುವಾಗ ಪಾತ್ರೆ ಕೆಲವೊಮ್ಮೆ ತಳ ಹಿಡಿದು ಬಿಡುತ್ತದೆ. ಇದನ್ನು ಎಷ್ಟೇ ತಿಕ್ಕಿದರೂ ಹೋಗುವುದಿಲ್ಲ. ಈ ಟೀ ಬ್ಯಾಗ್ ನಿಂದ ಕಲೆಗಳು ಕೂಡ ಸುಲಭವಾಗಿ ನಿವಾರಣೆಯಾಗುತ್ತದೆ. ಮೊದಲಿಗೆ ಆ ಪ್ಯಾನಿಗೆ ಬಿಸಿ ನೀರು ಹಾಕಿ ಟೀ ಬ್ಯಾಗ್ ಅನ್ನು ಅದರಲ್ಲಿ ಹಾಕಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ತಿಕ್ಕಿದರೆ ಅದರಲ್ಲಿರುವ ಕಲೆಗಳು ಸುಲಭವಾಗಿ ಬಿಟ್ಟುಕೊಳ್ಳುತ್ತದೆ.